ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

72 ವರ್ಷಗಳ ನಂತರ ಭಾರತೀಯ ವಾಯುಸೇನೆಯ ಹೊಸ ಪತಾಕೆಯ ಅನಾವರಣ

ಏರ್ ಫೋರ್ಸ್ ಡೇ ಪರೇಡ್‌ನಲ್ಲಿ ಏರ್ ಚೀಫ್ ಮಾರ್ಷಲ್ ಚೌಧರಿ ಅವರು ಐಎಎಫ್‌ನ ಹೊಸ ಧ್ವಜವನ್ನು ಅನಾವರಣಗೊಳಿಸಿದರು.
Published 8 ಅಕ್ಟೋಬರ್ 2023, 13:25 IST
Last Updated 8 ಅಕ್ಟೋಬರ್ 2023, 16:04 IST
ಅಕ್ಷರ ಗಾತ್ರ

ಪ್ರಯಾಗರಾಜ್‌ : ಭಾರತೀಯ ವಾಯುಪಡೆಯು (ಐಎಎಫ್‌) ತನ್ನ ಹೊಸ ಪತಾಕೆಯನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಭಾನುವಾರ ಬಿಡುಗಡೆ ಮಾಡಿತು. 72 ವರ್ಷಗಳ ಬಳಿಕ ಇಂಥದ್ದೊಂದು ಬದಲಾವಣೆಯನ್ನು ತಂದಿರುವ ಐಎಎಫ್‌, ತನ್ನ ಮೌಲ್ಯಗಳನ್ನು ಎತ್ತಿಹಿಡಿಯುವ ರೀತಿಯಲ್ಲಿ ಪತಾಕೆಯನ್ನು ವಿನ್ಯಾಸಗೊಳಿಸಿದೆ.

ಇಲ್ಲಿ ನಡೆದ ಭಾರತೀಯ ವಾಯುಪಡೆಯ 91ನೇ ದಿನಾಚರಣೆಯಲ್ಲಿ ಐಎಎಫ್‌ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಅವರು ಹೊಸ ಪತಾಕೆ ಬಿಡುಗಡೆಗೊಳಿಸಿದರು. ‘ಐಎಎಫ್‌ನ ಇತಿಹಾಸದಲ್ಲಿ ಇದು ಅವಿಸ್ಮರಣೀಯ ದಿನ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡುವ ಮೂಲಕ ಐಎಎಫ್‌ ಸಂಭ್ರಮ ಹಂಚಿಕೊಂಡಿದೆ. 

ಈ ಕುರಿತು ಪ್ರಕಟಣೆ ಹೊರಡಿಸಿರುವ ಐಎಎಫ್‌, ‘ಭಾರತೀಯ ವಾಯುಪಡೆಯ ಮೌಲ್ಯಗಳನ್ನು ಪ್ರತಿಫಲಿಸುವಂತೆ ಪತಾಕೆಯನ್ನು ವಿನ್ಯಾಸಗೊಳಿಸಲಾಗಿದೆ. ಅದರ ದ್ಯೋತಕವಾಗಿ ಪತಾಕೆ ಹಾರಾಡುವ ಜಾಗದಲ್ಲಿ (ಬಲಭಾಗದ ಮೂಲೆಯಲ್ಲಿ) ಐಎಎಫ್‌ನ ಲಾಂಛನವನ್ನು ಚಿತ್ರಿಸಲಾಗಿದೆ’ ಎಂದಿದೆ. 

ಇಷ್ಟು ದಿನಗಳು ಬಳಕೆಯಲ್ಲಿದ್ದ ಐಎಎಫ್‌ ಧ್ವಜವನ್ನು 1950ರಲ್ಲಿ ಅಂಗೀಕರಿಸಲಾಗಿತ್ತು. ಅಲ್ಲಿಂದ ಈಚೆಗೆ ಇಂಥದ್ದೊಂದು ಬದಲಾವಣೆ    ನಡೆದಿರಲಿಲ್ಲ.

ವಿನ್ಯಾಸ ಹೀಗಿದೆ: ಐಎಎಫ್‌ನ ಹೊಸ ಪತಾಕೆಯು ನೀಲಿ ಬಣ್ಣದ್ದಾಗಿದ್ದು, ಅದು ತ್ರಿವರ್ಣ ಧ್ವಜ, ಐಎಎಫ್‌ ಲಾಂಛನ, ತ್ರಿವರ್ಣದ ವೃತ್ತಾಕಾರ ವಿನ್ಯಾಸವನ್ನು ಒಳಗೊಂಡಿದೆ.

ವಾಯುಪಡೆ ದಿನಾಚರಣೆಯ ಪಥಸಂಚಲನವನ್ನು 2021ರ ವರೆಗೆ ದೆಹಲಿಯ ಹಿಂಡನ್‌ ವಾಯುನೆಲೆಯಲ್ಲಿ ನಡೆಸಲಾಗುತ್ತಿತ್ತು. 2022ರಲ್ಲಿ ಚಂಡೀಗಢದಲ್ಲಿ ನಡೆಸಲಾಯಿತು. ಈ ಬಾರಿ ಪ್ರಯಾಗರಾಜ್‌ನಲ್ಲಿ ನಡೆಸಲಾಯಿತು.

2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿರುವ ದೇಶವಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಆ ವೇಳೆಗೆ ಅತ್ಯುನ್ನತ ವಾಯುಪಡೆಗಳಲ್ಲಿ ಐಎಎಫ್‌ ಕೂಡಾ ಸೇರಿರಬೇಕು

-ವಿ.ಆರ್‌. ಚೌಧರಿ ಐಎಎಫ್‌ ಮುಖ್ಯಸ್ಥ

‘ಮೇರೆ ಮೀರಿ ಶಕ್ತಿ ಪ್ರದರ್ಶಿಸುತ್ತಿದೆ’

ವಾಯುಪಡೆ ದಿನಾಚರಣೆ ಅಂಗವಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಅನಿಲ್‌ ಚೌಹಾಣ್‌ ಅವರು ಭಾನುವಾರ ಶುಭ ಹಾರೈಸಿದ್ದಾರೆ. ‘ಭಾರತೀಯ ವಾಯುಪಡೆಯು ಇಂದು ಘಾತಕ ಮತ್ತು ಬಲಿಷ್ಠವಾದ ಪಡೆಯಾಗಿದೆ. ಮೇರೆ ಮೀರಿ ಅದರ ಶಕ್ತಿ ಪ್ರದರ್ಶಿಸುತ್ತಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಹೇಳಿದ್ದಾರೆ.  ‘ದೇಶಕ್ಕೆ ವಾಯುಪಡೆಯು ಸುಮಾರು ಒಂದು ಶತಮಾನದಿಂದ ಸ್ಥಿರ ಬದ್ಧತೆ ಮತ್ತು ಸಾಟಿಯಿಲ್ಲದ ಸೇವೆಯನ್ನು ನೀಡುತ್ತಿದೆ’ ಎಂದು ಸಿಡಿಎಸ್‌ ಜನರಲ್‌ ಅನಿಲ್‌ ಚೌಹಾನ್‌ ಹೇಳಿದ್ದಾರೆ.

ಐಎಎಫ್‌ ಪತಾಕೆಯ ಇತಿಹಾಸ

ಭಾರತೀಯ ವಾಯುಪಡೆಯನ್ನು 1932ರ ಅಕ್ಟೋಬರ್‌ 8ರಂದು ಅಧಿಕೃತವಾಗಿ ಸ್ಥಾಪಿಸಲಾಯಿತು. ಎರಡನೆ ಮಹಾಯುದ್ಧದಲ್ಲಿ ಭಾರತೀಯ ಯೋಧರು ತೋರಿದ ವೃತ್ತಿಪರ ದಕ್ಷತೆ ಮತ್ತು ಸಾಹಸವನ್ನು ಪರಿಗಣಿಸಿ 1945ರಲ್ಲಿ ಬ್ರಿಟಿಷ್‌ ಆಡಳಿತವು ‘ರಾಯಲ್‌’ ಎಂಬ ಉಪಮೆ ನೀಡಿತು. ನಂತರ ಭಾರತೀಯ ವಾಯುಪಡೆಯನ್ನು ‘ರಾಯಲ್‌ ಇಂಡಿಯನ್‌ ಏರ್‌ ಫೋರ್ಸ್‌’ (ಆರ್‌ಐಎಎಫ್‌) ಎಂದು ಕರೆಯಲಾಯಿತು. ವಸಾಹತುಶಾಹಿ ಗುರುತಾಗಿದ್ದ ‘ರಾಯಲ್‌’ ಎಂಬ ಉಪಮೆಯನ್ನು ಭಾರತ ಸ್ವತಂತ್ರಗೊಂಡ ಬಳಿಕ 1950ರಲ್ಲಿ ಕೈಬಿಡಲಾಯಿತು.  ಆರ್‌ಐಎಎಫ್‌ನ ಲಾಂಛನವನ್ನೂ ಕೈಬಿಟ್ಟ ಭಾರತ ಸರ್ಕಾರವು ದೇಶದ ಧ್ವಜದ ಬಣ್ಣಕ್ಕೆ ಅನುಗುಣವಾಗಿ ಹೊಸ ಪತಾಕೆಯನ್ನು ವಿನ್ಯಾಸಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT