ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಪ್ರಕರಣ:ಮೊಕದ್ದಮೆ ರದ್ದತಿಗೆ ಹೈಕೋರ್ಟ್ ನಿರಾಕರಣೆ

Published 18 ಆಗಸ್ಟ್ 2024, 13:31 IST
Last Updated 18 ಆಗಸ್ಟ್ 2024, 13:31 IST
ಅಕ್ಷರ ಗಾತ್ರ

ಪ್ರಯಾಗ್‌ರಾಜ್‌ (ಉತ್ತರಪ್ರದೇಶ): ಧಾರ್ಮಿಕ ಮೆರವಣಿಗೆಯಲ್ಲಿ ಕುರಾನ್‌ನ ಶ್ಲೋಕಗಳಿದ್ದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಿದ್ದ ಆರೋಪದಲ್ಲಿ ಆರು ಜನರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ಕೋಮು ವೈಷಮ್ಯವನ್ನು ಸೃಷ್ಟಿಸಲು ಬಯಸುವವರು ಇಂತಹ ಘಟನೆಗಳನ್ನು ಬಳಸಿಕೊಳ್ಳಬಹುದು ಎಂದು ಅದು ಎಚ್ಚರಿಸಿದೆ.

ಗುಲಾಮುದ್ದೀನ್ ಮತ್ತು ಇತರ ಐವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿನೋದ್ ದಿವಾಕರ್, ಈ ಕೃತ್ಯವು ಭಾರತದ ಧ್ವಜ ಸಂಹಿತೆ 2002ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮತ್ತು ರಾಷ್ಟ್ರೀಯ ಘನತೆಯ ಅಪಮಾನ ತಡೆ ಕಾಯ್ದೆ 1971ರ ಉಲ್ಲಂಘನೆ ಎಂದು ಹೇಳಿದರು.

ಜುಲೈ 29ರಂದು ನೀಡಿರುವ ಆದೇಶದಲ್ಲಿ ನ್ಯಾಯಮೂರ್ತಿಗಳು, ಕೋಮು ವೈಷಮ್ಯವನ್ನು ಸೃಷ್ಟಿಸಲು ಅಥವಾ ವಿವಿಧ ಸಮುದಾಯಗಳ ನಡುವೆ ತಪ್ಪು ತಿಳಿವಳಿಕೆ ಮೂಡಿಸಲು ಬಯಸುವವರು ಇಂತಹ ಘಟನೆಗಳನ್ನು ಬಳಸಿಕೊಳ್ಳಬಹುದು. ಕೆಲವು ವ್ಯಕ್ತಿಗಳ ಇಂತಹ ಕ್ರಮಗಳು ಇಡೀ ಸಮುದಾಯವನ್ನು ಕಳಂಕಗೊಳಿಸಲು ಆಸ್ಪದ ನೀಡದಂತೆ ತಡೆಯುವುದು ನಿರ್ಣಾಯಕವಾಗಿದೆ ಎಂದೂ ತಿಳಿಸಿದ್ದಾರೆ.

ಆರೋಪಿ ಗುಲಾಮುದ್ದೀನ್ ಮತ್ತು ಇತರ ಐವರ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 2023ರ ಅಕ್ಟೋಬರ್ 4 ರಂದು ಚಾರ್ಜ್ ಶೀಟ್ ಸಲ್ಲಿಸಿದರು. ವಿಚಾರಣಾ ನ್ಯಾಯಾಲಯವು 2024ರ ಮೇ 14ರಂದು ಚಾರ್ಜ್ ಶೀಟ್ ಪರಿಗಣಿಸಿ, ಆರೋಪಿಗಳಿಗೆ ಸಮನ್ಸ್ ನೀಡಿದೆ.

ಆರೋಪಿಗಳು ಜಲೌನ್ ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT