ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಬಿಬಿಎಸ್‌ ಹಿಂದಿ ಪಠ್ಯ ಬಿಡುಗಡೆ ಮಾಡಿದ ಅಮಿತ್‌ ಶಾ

ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
Last Updated 16 ಅಕ್ಟೋಬರ್ 2022, 15:05 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶ ಸರ್ಕಾರವು ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಮಹಾತ್ವಾಕಾಂಕ್ಷಿ ಯೋಜನೆ ಕಾರ್ಯಗತಗೊಳಿಸುವ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ.

ಮೆಡಿಕಲ್‌ ಬಯೋಕೆಮಿಸ್ಟ್ರಿ, ಅನಾಟಮಿ ಮತ್ತು ಮೆಡಿಕಲ್‌ ಸೈಕಾಲಜಿ ವಿಷಯಗಳ ಪುಸ್ತಕಗಳನ್ನುಹಿಂದಿಯಲ್ಲೇ ಸಿದ್ಧಪಡಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ಇವುಗಳನ್ನು ಬಿಡುಗಡೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ‘ಇದೊಂದು ಐತಿಹಾಸಿಕ ದಿನ. ಹಿಂದಿಯಲ್ಲಿ ಎಂಬಿಬಿಎಸ್‌ ಕೋರ್ಸ್‌ ಆರಂಭಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಭಾಜನವಾಗಿದೆ’ ಎಂದಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಗಳಲ್ಲಿ ಹಿಂದಿಯಲ್ಲೇ ಮಾತನಾಡುತ್ತಾರೆ. ಆ ಮೂಲಕ ಹಿಂದಿಯ ಮಹತ್ವವನ್ನು ವಿಶ್ವಕ್ಕೆ ಸಾರುತ್ತಿದ್ದಾರೆ. ಪ್ರಧಾನಿಯವರ ಈ ನಡೆಯಿಂದಾಗಿ ದೇಶದ ಯುವಕರ ಆತ್ಮವಿಶ್ವಾಸ ಇಮ್ಮಡಿಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

‘21ನೇ ಶತಮಾನದಲ್ಲಿ ಕೆಲವರು ‘ಪ್ರತಿಭಾ ಪಲಾಯನ’ ಸಿದ್ಧಾಂತ ಅಳವಡಿಸಿಕೊಂಡಿದ್ದರೆ, ಮೋದಿ ಅವರು ಇದನ್ನು ‘ಪ್ರತಿಭಾ ಪೋಷಣೆ’ ಸಿದ್ಧಾಂತವನ್ನಾಗಿ ರೂಪಾಂತರಗೊಳಿಸಿದ್ದಾರೆ. ಈ ದಿನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಮೋದಿ ಅವರ ಕನಸು ಸಾಕಾರಗೊಳಿಸಿರುವುದು ಹೆಮ್ಮೆಯ ವಿಚಾರ’ ಎಂದು ಹೇಳಿದ್ದಾರೆ.

‘ಭಾರತದ ಇತರ ಎಂಟು ಭಾಷೆಗಳಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ನೀಡುವ ಕೆಲಸ ಆರಂಭವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಹಿಂದಿಯಲ್ಲಿ ಎಂಬಿಬಿಎಸ್‌ ಕೋರ್ಸ್‌ ಶುರುಮಾಡಲಾಗಿದೆ. ಇತರ ಭಾಷೆಗಳಲ್ಲೂ ಶೀಘ್ರವೇ ಎಂಬಿಬಿಎಸ್‌ ಕೋರ್ಸ್‌ ಆರಂಭಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ತಮಗೆ ಇಂಗ್ಲಿಷ್‌ ಬರುವುದಿಲ್ಲ ಎಂಬ ಕೀಳರಿಮೆ ಇನ್ನು ಮುಂದೆ ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಇರುವುದಿಲ್ಲ. ಅವರು ಹೆಮ್ಮೆಯಿಂದಲೇ ತಾವು ಮಾತನಾಡುವ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT