ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗದರ್ಶಿ ಚಿಟ್‌ ಫಂಡ್ ಪ್ರಕರಣ: ರಾಮೋಜಿ ರಾವ್, ಶೈಲಜಾಗೆ ಸಿಐಡಿ ಸಮನ್ಸ್

Last Updated 28 ಮಾರ್ಚ್ 2023, 7:36 IST
ಅಕ್ಷರ ಗಾತ್ರ

ಅಮರಾವತಿ: ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ರಾಮೋಜಿ ರಾವ್ ಮತ್ತು ಅವರ ಸೊಸೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಚೆರುಕುರಿ ಶೈಲಜಾ ಹಾಗೂ ಉನ್ನತ ಅಧಿಕಾರಿಗಳಿಗೆ ತನಿಖೆಗೆ ಹಾಜರಾಗುವಂತೆ ಆಂಧ್ರ ಪ್ರದೇಶದ ಸಿಐಡಿ, ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ತನಿಖೆಗೆ ಸಿಐಡಿ ಅಧಿಕಾರಿಗಳು ನಾಲ್ಕು ದಿನಗಳ ಆಯ್ಕೆಯನ್ನು ನೀಡಿದ್ದು, ಬುಧವಾರ, ಶುಕ್ರವಾರ, ಸೋಮವಾರ ಅಥವಾ ಮಂಗಳವಾರದಂದು ಹಾಜರಾಗುವಂತೆ ಸೂಚಿಸಿದ್ದಾರೆ.

ವಂಚನೆ, ಠೇವಣಿಗಳನ್ನು ಮ್ಯೂಚುವಲ್ ಫಂಡ್‌ಗಳಿಗೆ ತಿರುಗಿಸುವುದು ಹಾಗೂ ಚಿಟ್ ಫಂಡ್ ವ್ಯವಹಾರ ಕಾಯಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಉಲ್ಲಂಘನೆ ಆರೋಪಗಳ ತನಿಖೆಗಾಗಿ ನೋಟಿಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.

‘ಪ್ರಕರಣದ ಸತ್ಯಾಸತ್ಯತೆ ಗಮನದಲ್ಲಿಟ್ಟುಕೊಂಡು, ಪರಿಣಾಮಕಾರಿ ತನಿಖೆಗಾಗಿ ಮತ್ತು ಉತ್ತಮ ನಿರ್ಣಯಕ್ಕೆ ಬರಲು ಪ್ರಕರಣದ ತನಿಖಾಧಿಕಾರಿಯಾಗಿರುವ ನಾನು ನಿಮ್ಮ ತನಿಖೆಯು ನ್ಯಾಯಯುತ ಮತ್ತು ಅವಶ್ಯಕವಾಗಿದೆ ಎಂದು ಭಾವಿಸುತ್ತೇನೆ’ ಎಂದು ಡಿವೈಎಸ್‌ಪಿ ಶ್ರೇಣಿಯ ಸಿಐಡಿ ಅಧಿಕಾರಿ ನೀಡಿರುವ ಸಮನ್ಸ್‌ನಲ್ಲಿ ತಿಳಿಸಲಾಗಿದೆ.

ಐಪಿಸಿ ಸೆಕ್ಷನ್ 420, 120 - ಬಿ, 477 (ಎ), ಸೆಕ್ಷನ್ 34 ಮತ್ತು ಆಂಧ್ರ ಪ್ರದೇಶ ಠೇವಣಿದಾರರ ಹಣಕಾಸು ಹಿತರಕ್ಷಣಾ ಕಾಯಿದೆ, 1999ರ ಸೆಕ್ಷನ್ 5ರ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳನ್ನು ಉಲ್ಲೇಖಿಸಿ ತನಿಖೆಗೆ ಸಹಕರಿಸುವಂತೆ ರಾಮೋಜಿ ರಾವ್ ಮತ್ತು ಶೈಲಜಾ ಅವರನ್ನು ವಿನಂತಿಸಿರುವ ಅಧಿಕಾರಿ, ಅವರಿಗೆ ಅನುಕೂಲಕರವಾದ ದಿನಾಂಕವನ್ನು ತಿಳಿಸಲು ಕೇಳಿದ್ದಾರೆ.

ಸಿಐಡಿ ಪೊಲೀಸ್ ಠಾಣೆಯಲ್ಲಿ ಚಿಟ್ ಫಂಡ್ ಕಾಯಿದೆ, 1982ರ ಸೆಕ್ಷನ್ 76 ಮತ್ತು 79ರ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳನ್ನು ಸಹ ಅಧಿಕಾರಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ, ಸಿಐಡಿಯು ಕಂಪನಿಯ ಕೆಲವು ಉದ್ಯೋಗಿಗಳನ್ನು ಬಂಧಿಸಿತ್ತು. ವೈಯಕ್ತಿಕ ಲಾಭಕ್ಕಾಗಿ ಠೇವಣಿದಾರರ ಹಣವನ್ನು ಮ್ಯೂಚುವಲ್ ಫಂಡ್‌ಗಳು ಮತ್ತು ಷೇರು ಮಾರುಕಟ್ಟೆಗಳಿಗೆ ತಿರುಗಿಸುವುದು ಸೇರಿದಂತೆ ಹಲವು ಅಕ್ರಮಗಳ ಆರೋಪದಲ್ಲಿ ಮಾರ್ಗದರ್ಶಿ ವಿರುದ್ಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT