ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನದ 370ನೇ ವಿಧಿ ಈಗ ಇತಿಹಾಸ, ಅದು ಮತ್ತೆಂದೂ ಮರುಕಳಿಸುವುದಿಲ್ಲ: ಅಮಿತ್ ಶಾ

ಬಿಜೆಪಿ ಪ್ರಣಾಳಿಕೆ ಬಿಡುಗಡೆ
Published : 6 ಸೆಪ್ಟೆಂಬರ್ 2024, 13:24 IST
Last Updated : 6 ಸೆಪ್ಟೆಂಬರ್ 2024, 13:24 IST
ಫಾಲೋ ಮಾಡಿ
Comments

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದ್ದ ಸಂವಿಧಾನದ 370ನೇ ವಿಧಿ ಈಗ ಇತಿಹಾಸ. ಅದು, ಮತ್ತೆಂದೂ ಮರುಕಳಿಸುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಅವರು, ‘ಈಗಿನ ಕೇಂದ್ರಾಡಳಿತ ಪ್ರದೇಶದಲ್ಲಿ 1990ರಿಂದ ಸುಮಾರು 40 ಸಾವಿರ ಹತ್ಯೆಗಳು ಜರುಗಿವೆ. ಈ ಕುರಿತು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿದೆ’ ಎಂದು ಹೇಳಿದರು.

‘ಸಂವಿಧಾನದ ವಿಧಿ 370ರಡಿ ವಿದೇಶಾಂಗ ವ್ಯವಹಾರ, ಹಣಕಾಸು, ರಕ್ಷಣೆ ಕ್ಷೇತ್ರ ಹೊರತುಪಡಿಸಿ ಆಂತರಿಕ ವಿಷಯಗಳಲ್ಲಿ ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಲಾಗಿತ್ತು. 2019ರಲ್ಲಿ ಮೋದಿ ನೇತೃತ್ವದ ಸರ್ಕಾರ, ವಿಶೇಷ ಸ್ಥಾನಮಾನ ಕೈಬಿಟ್ಟಿದೆ. ಜಮ್ಮು ಹಾಗೂ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಗುರುತಿಸಿದೆ’ ಎಂದರು.

370ನೇ ವಿಧಿಯಡಿ ಮತ್ತೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂಬ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, ‘ಆ ವಿಧಿಯನ್ನು ಈಗ ಶಾಶ್ವತವಾಗಿ ಹೂತು ಹಾಕಲಾಗಿದೆ. ಅದನ್ನು ಮರುಸ್ಥಾಪಿಸುವ ಯಾವುದೇ ಯತ್ನವನ್ನು ಬಿಜೆಪಿ ತಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.

ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಭರವಸೆಯನ್ನು ಕಾಂಗ್ರೆಸ್‌ ಸಮರ್ಥಿಸಲಿದೆಯೇ ಎಂದು ರಾಹುಲ್‌ಗಾಂಧಿ ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು. ರಾಹುಲ್‌ಗಾಂಧಿ ಅವರು ಎನ್‌ಸಿ ಪ್ರಣಾಳಿಕೆಯನ್ನು ಸಮರ್ಥಿಸುತ್ತಾರೆ. ಆದರೆ, ಅದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ ಎಂದು ಟೀಕಿಸಿದರು.

ಜಮ್ಮು ಮತ್ತು ಕಾಶ್ಮೀರ ಎಂದಿಗೂ ಭಾರತದ ಭಾಗವೇ ಆಗಿದೆ, ಆಗಿರುತ್ತದೆ. ವಿಧಿ 370 ಮತ್ತು ವಿಧಿ 35 ಕೈಬಿಟ್ಟುದರ ಹಿರಿಮೆ ಬಿಜೆಪಿಗೆ ಸಲ್ಲಬೇಕು. ನರೇಂದ್ರ ಮೋದಿ ಅವರ ಆಡಳಿತ ಶುರುವಾದ ಬಳಿಕ ಈ ಪ್ರಾಂತ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಹೇಳಿದರು.

ಚುನಾವಣಾ ನಂತರದ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ತನ್ನ ಆಯ್ಕೆಯನ್ನು ಮುಕ್ತವಾಗಿಸಿರಿಕೊಂಡಿದೆ. ಆದರೆ, ನ್ಯಾಷನಲ್‌ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್‌ ಪಕ್ಷ ಒಳಗೊಂಡ ಸರ್ಕಾರ ರಚನೆಯಾಗುವುದಿಲ್ಲ’ ಎಂದು ಹೇಳಿದರು.

ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಇರುವುದು ಅಸಾಧ್ಯ. ನೆರೆ ರಾಷ್ಟ್ರ ಪಾಕಿಸ್ತಾನವು ಭಯೋತ್ಪಾದನೆಯನ್ನು ಹತ್ತಿಕ್ಕದಿದ್ದರೆ ಆ ರಾಷ್ಟ್ರದ ಜೊತೆಗೆ ಮಾತುಕತೆ ನಡೆಸುವುದು ಸಾಧ್ಯವೇ ಇಲ್ಲ.
–ಅಮಿತ್ ಶಾ, ಕೇಂದ್ರ ಗೃಹ ಸಚಿವ 

ನಿಮ್ಮ ಕಣ್ಗಾವಲಿದ್ದರೂ ಭದ್ರತೆ ಪರಿಸ್ಥಿತಿಹದಗೆಡುತ್ತಿದೆ ಏಕೆ–ಶಾಗೆ ಕಾಂಗ್ರೆಸ್‌ ಪ್ರಶ್ನೆ

ನವದೆಹಲಿ: ಜಮ್ಮು–ಕಾಶ್ಮೀರ ಕುರಿತ ಕೇಂದ್ರದ ನಿಲುವಿಗೆ ಸಂಬಂಧಿಸಿ ಗೃಹ ಸಚಿವ ಅಮಿತ್‌ ಶಾ ಅವರನ್ನು ಟೀಕಿಸಿರುವ ಕಾಂಗ್ರೆಸ್‌ ‘ನಿಮ್ಮ ಕಣ್ಗಾವಲಿದ್ದರೂ ಭದ್ರತಾ ಪರಿಸ್ಥಿತಿ ಏಕೆ ಹದಗೆಡುತ್ತಿದೆ’ ಎಂದು ಪ್ರಶ್ನಿಸಿದೆ.

’ಜಮ್ಮು ಮತ್ತು ಕಾಶ್ಮೀರದ ರಾಜಕೀಯ ವಿಶೇಷ ಅಧಿಕಾರ ಕುರಿತಂತೆ ಹಸ್ತಕ್ಷೇಪ ನಡೆಸಲು ಕೇಂದ್ರ  ಯತ್ನಿಸುತ್ತಿರುವುದೇಕೆ ಎಂದೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಪ್ರಶ್ನಿಸಿದ್ದಾರೆ.

ವಿಶೇಷ ಸ್ಥಾನಮಾನ ಅಂತ್ಯವಾಗಿದೆ ಎಂದು ಕೇಂದ್ರ ಹೇಳಿಕೊಂಡರೂ ವಾಸ್ತವವಾಗಿ ಭಿನ್ನ ರಾಜಕೀಯ ವ್ಯವಸ್ಥೆ ರೂಪಿಸಲಾಗಿದೆ. ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ತಗ್ಗಿಸಲಾಗಿದೆ. ಚುನಾವಣೆ ರದ್ದುಪಡಿಸಿ ಸಂವಿಧಾನಿಕ ನೈತಿಕತೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದೂ ಟೀಕಿಸಿದ್ದಾರೆ.

ಡಿಸೆಂಬರ್ 11 2023ರಂದು ಸಂಸತ್ತಿನಲ್ಲಿಯೇ ಶಾ ಅವರು ಸೂಕ್ತ ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನವನ್ನು ನೀಡಲಾಗುವುದು ಎಂದು ಅಮಿತ್ ಶಾ ಅವರೇ ಹೇಳಿದ್ದರು ಎಂದು ಅವರು ನೆನಪಿಸಿದ್ದಾರೆ. 2019ರ ನಂತರ ಜಮ್ಮು–ಕಾಶ್ಮೀರದಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಇದುವರೆವಿಗೂ 414 ಘಟಕಗಳಷ್ಟೇ ನೋಂದಣಿಯಾಗಿದ್ದು ವಾಸ್ತವ ಹೂಡಿಕೆಯ ಮೊತ್ತ ಕೇವಲ ₹ 2518 ಕೋಟಿಯಷ್ಟೇ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT