ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುನ್ಮಾನ ಮತಯಂತ್ರ ಧ್ವಂಸ ಪ್ರಕರಣ: YSRCP ನಾಯಕ ರಾಮಕೃಷ್ಣ ರೆಡ್ಡಿ ಬಂಧನ

Published 26 ಜೂನ್ 2024, 16:14 IST
Last Updated 26 ಜೂನ್ 2024, 16:14 IST
ಅಕ್ಷರ ಗಾತ್ರ

ನರಸರಾವ್ ಪೇಟೆ(ಆಂಧ್ರ ಪ್ರದೇಶ): ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಆಂಧ್ರ ಪ್ರದೇಶದಲ್ಲಿ ವಿದ್ಯುನ್ಮಾನ ಮತಯಂತ್ರವನ್ನು ಧ್ವಂಸಗೊಳಿಸಿ, ಅದನ್ನು ಪ್ರಶ್ನಿಸಿದ ಟಿಡಿಪಿ ಬೂತ್ ಏಜೆಂಟ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ವೈಎಸ್‌ಆರ್‌ಸಿಪಿ ನಾಯಕ ಪಿ ರಾಮಕೃಷ್ಣ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಈ ಬಂಧನ ಆಗಿದೆ.

ಮೇ 13ರಂದು ನಡೆಯುತ್ತಿದ್ದ ಮತದಾನದ ವೇಳೆ ಮಾಚೆರ್ಲಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 202ಕ್ಕೆ ನುಗ್ಗಿದ್ದ ಮಾಜಿ ಶಾಸಕ ರಾಮಕೃಷ್ಣ ರೆಡ್ಡಿ, ತಮ್ಮ ಪರವಾಗಿ ಮತದಾನ ಆಗುತ್ತಿಲ್ಲ ಎಂದು ಕೋಪಗೊಂಡು ಇವಿಎಂ ಅನ್ನು ನೆಲಕ್ಕೆ ಬಡಿದು ಧ್ವಂಸ ಮಾಡಿದ್ದರು. ಇದನ್ನು ಪ್ರಶ್ನಿಸಿದ ಟಿಡಿಪಿ ಬೂತ್ ಏಜೆಂಟ್‌ಗೆ ಬೆದರಿಕೆ ಹಾಕಿದ್ದರು. ಅಲ್ಲದೆ, ಬೆಂಬಲಿಗರ ಮೂಲಕ ಆತನ ಮೇಲೆ ದೊಣ್ಣೆ, ಚಾಕು ಮತ್ತು ರಾಡ್‌ಗಳಿಂದ ಹಲ್ಲೆ ಮಾಡಿಸಿದ್ದರು.

ರೆಡ್ಡಿ ಇವಿಎಂ ಧ್ವಂಸಗೊಳಿಸಿದ್ದ ದೃಶ್ಯ ಮತಗಟ್ಟೆಯಲ್ಲಿ ಚುನಾವಣಾ ಆಯೋಗ ಅಳವಡಿಸಿದ್ದ ವೆಬ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ, ವಿಡಿಯೊ ಪರಿಶೀಲನೆ ನಡೆಸಲಾಗಿ ರೆಡ್ಡಿ ಸಿಕ್ಕಿಬಿದ್ದಿದ್ದರು. ಈ ಮಧ್ಯೆ, ತಲೆಮರೆಸಿಕೊಂಡಿದ್ದ ರೆಡ್ಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂಬ ಕಾರಣಕ್ಕೆ ಅವರನ್ನು ಬಂಧಿಸದಂತೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು.

ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿ ರೆಡ್ಡಿ, ಟಿಡಿಪಿಯ ಬ್ರಹ್ಮಾನಂದ ರೆಡ್ಡಿ ವಿರುದ್ಧ ಸೋತಿದ್ದಾರೆ. ಬುಧವಾರ ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಕೂಡಲೇ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT