ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ |ಕಾಂಗ್ರೆಸ್‌ನಿಂದ ಪ್ರಣಾಳಿಕೆ ಬಿಡುಗಡೆ: ರೈತ, ಮಹಿಳೆ, ಯುವ ಜನರಿಗೆ ಒತ್ತು

Published : 28 ಸೆಪ್ಟೆಂಬರ್ 2024, 6:04 IST
Last Updated : 28 ಸೆಪ್ಟೆಂಬರ್ 2024, 6:04 IST
ಫಾಲೋ ಮಾಡಿ
Comments

ಚಂಡೀಗಢ: ರಾಜ್ಯದಲ್ಲಿ ವಿದೇಶಿ ಉದ್ಯೋಗ ಮಂಡಳಿ ಸ್ಥಾಪನೆ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು, ರೈತರ ಕಲ್ಯಾಣಕ್ಕಾಗಿ ಆಯೋಗ ಸ್ಥಾಪನೆ, ಹುತಾತ್ಮ ಯೋಧರ ಕುಟುಂಬಗಳಿಗೆ ₹ 2 ಕೋಟಿ ಪರಿಹಾರ, ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರ್ಮಿಕ ಘಟಕಗಳಿಗೆ ಉತ್ತೇಜನ, ಹರಿಯಾಣ ಅಲ್ಪಸಂಖ್ಯಾತರ ಆಯೋಗದ ಪುನರ್‌ ರಚನೆ ಒಳಗೊಂಡಂತೆ ವಿವರವಾದ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಶನಿವಾರ ಬಿಡುಗಡೆ ಮಾಡಿದೆ.

ಹರಿಯಾಣ ಕಾಂಗ್ರೆಸ್‌ ಮುಖ್ಯಸ್ಥ ಉದಯ್‌ ಭಾನ್‌, ವಿರೋಧ ಪಕ್ಷದ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಸೇರಿದಂತೆ ಇತರ ನಾಯಕರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಅಕ್ಟೋಬರ್‌ 5ರಂದು ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 8ರಂದು ಮತ ಎಣಿಕೆ ನಡೆಯಲಿದೆ.

ಎಂಎಸ್‌ಪಿಗೆ ಕಾನೂನು ಖಾತರಿ, ಜಾತಿ ಸಮೀಕ್ಷೆ, ₹ 500ಕ್ಕೆ ಅಡುಗೆ ಅನಿಲ ಸಿಲಿಂಡರ್‌, 18ರಿಂದ 60 ವರ್ಷದೊಳಗಿನ ಮಹಿಳೆಗೆ ಮಾಸಿಕ ₹ 2,000 ಆರ್ಥಿಕ ನೆರವು, ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ₹ 6,000 ಮಾಸಿಕ ಪಿಂಚಣಿ, ಎರಡು ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿ, 300 ಯುನಿಟ್‌ ಉಚಿತ ವಿದ್ಯುತ್‌, ₹ 25 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್‌ ಈಗಾಗಲೇ ಘೋಷಿಸಿದ್ದು, ಅವುಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ. 

ಸಮಾಜದ ಎಲ್ಲ ವರ್ಗದ ಜನರ ಜತೆ ಚರ್ಚಿಸಿ, ಸಲಹೆಗಳನ್ನು ಪಡೆದು ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಅಶೋಕ್‌ ಗೆಹಲೋತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂಗ್ರೆಸ್‌ ತಾನು ನೀಡುವ ಭರವಸೆಗಳನ್ನು ಈಡೇರಿಸುವ ವಿಶ್ವಾಸಾರ್ಹತೆ ಹೊಂದಿದೆ ಎಂದು ಅವರು ಹೇಳಿದರು.

ಪ್ರಣಾಳಿಕೆಯಲ್ಲಿರುವ ಪ್ರಮುಖಾಂಶಗಳು

  • ರೈತರ ಸಮಸ್ಯೆಗಳನ್ನು ಆದ್ಯತೆಗೆ ಅನುಗುಣವಾಗಿ ಪರಿಹರಿಸಲಾಗುವುದು. ಸಣ್ಣ ರೈತರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್‌ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ರೈತರಿಗೆ ಡೀಸೆಲ್‌ ಕಾರ್ಡ್‌ಗಳ ವಿತರಣೆ.

  • ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸಿದ ವೇಳೆ ಮೃತಪಟ್ಟ ರೈತರಿಗಾಗಿ ಸ್ಮಾರಕ ನಿರ್ಮಿಸಲಾಗುವುದು. ಮೃತ ರೈತರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ. ಧರಣಿ ವೇಳೆ ಮೃತಪಟ್ಟ 736 ರೈತರಿಗೆ ಹುತಾತ್ಮ ಸ್ಥಾನಮಾನ.

  • ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಪರಿವಾರ ಪೆಹಚಾನ್‌ ಪತ್ರ ಅಥವಾ ಕುಟುಂಬ ಐಡಿ ಪೋರ್ಟಲ್‌ ಅನ್ನು ಸ್ಥಗಿತ. ಅಲ್ಲದೆ ಆಸ್ತಿ ಗುರುತಿನ ಯೋಜನೆಯ ಪರಿಶೀಲನೆ.

  • ಮಹಿಳಾ ಆಯೋಗ ಪರಿಶಿಷ್ಠ ಜಾತಿ ಆಯೋಗ ಮತ್ತು ಅಲ್ಪಸಂಖ್ಯಾತರ ಆಯೋಗಗಳ ಪುನರ್‌ ರಚನೆ. ಅವುಗಳಿಗೆ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಅಧಿಕಾರ.

  • ಹಿಂದುಳಿದ ವರ್ಗಗಳ ಕೆನೆಪದರ ಮಿತಿಯನ್ನು ₹ 6 ಲಕ್ಷದಿಂದ ₹ 10 ಲಕ್ಷಕ್ಕೆ ಏರಿಸಲಾಗುವುದು. ಇತರ ಹಿಂದುಳಿದ ವರ್ಗದವರ ಏಳಿಗೆಗಾಗಿ ಹಿಂದುಳಿದ ವರ್ಗಗಳ ಆಯೋಗ ರಚನೆ.

  • ಕೈಗಾರಿಕೆಗಳ ಅಭಿವೃದ್ದಿಗೆ ಪೂರಕವಾಗಿ ಹೊಸ ಕೈಗಾರಿಕಾ ನೀತಿ ರೂಪಿಸಲಾಗುವುದು.

  • ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬದವರಿಗೆ ₹ 2 ಕೋಟಿ ಪರಿಹಾರ. ಅಲ್ಲದೆ ಕುಟುಂಬದ ಒಬ್ಬರಿಗೆ ನೌಕರಿ.

  • ನರೇಗಾ ಯೋಜನೆಯಡಿ ದಿನಗೂಲಿಯನ್ನು ₹ 400ಕ್ಕೆ ಏರಿಕೆ.

  • ಮೇವಾತ್‌ನಲ್ಲಿ ಗುರು ಗೋವಿಂದ್‌ ಸಿಂಗ್‌ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಕಾಲೇಜುಗಳ ಆರಂಭ.

ರಾಹುಲ್, ‍ಪ್ರಿಯಾಂಕಾ ರೋಡ್ ಶೋ

ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಲೋಕಸಭೆ ವಿರೋಧ ಪಕ್ಷಸದ ನಾಯಕ ರಾಹುಲ್‌ ಗಾಂಧಿ ಅವರು ಕೆಲ ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಈಗಾಗಲೇ ಅವರು ಎರಡು ರ್‍ಯಾಲಿಗಳಲ್ಲಿ ಭಾಗವಹಿಸಿದ್ದು ಇನ್ನೂ ಕೆಲ ರ್‍ಯಾಲಿಗಳಲ್ಲಿ  ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಪರ ಮತ ಪ್ರಚಾರ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ರಾಹುಲ್‌ ಅವರ ರೋಡ್‌ ಶೋಗಳಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT