ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ಅವರು ಸೋಮವಾರ ನವದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ವೇಳೆ, ಹಿಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಳಸುತ್ತಿದ್ದ ಕುರ್ಚಿಯನ್ನು ಪಕ್ಕದಲ್ಲಿಯೇ ಇಟ್ಟುಕೊಂಡಿದ್ದರು. ಆ ಮೂಲಕ ‘ಅವರಿಗಾಗಿ ಕಾಯುತ್ತಿದ್ದೇನೆ’ ಎಂದು ಸಂದೇಶ ರವಾನಿಸಿದರು.
ದೆಹಲಿ ಸಚಿವಾಲಯದಲ್ಲಿರುವ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ 43 ವರ್ಷದ ಅತಿಶಿ ಅವರು ಬಿಳಿಬಣ್ಣದ ಕುರ್ಚಿಯಲ್ಲಿ ಆಸೀನರಾದರು. ಕೇಜ್ರಿವಾಲ್ ಬಳಸುತ್ತಿದ್ದ ಕೆಂಪು ಬಣ್ಣದ ಕುರ್ಚಿಯು ಬದಿಯಲ್ಲಿತ್ತು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು,‘ಮಹಾಕಾವ್ಯ ರಾಮಾಯಣದ ಉದಾಹರಣೆಯನ್ನು ಉಲ್ಲೇಖಿಸಿ, 14 ವರ್ಷಗಳ ಕಾಲ ಶ್ರೀರಾಮ ವನವಾಸಕ್ಕೆ ತೆರಳಿದಾಗ ಆತನ ಸಹೋದರ ಭರತ ಎದುರಿಸಿದ ಸ್ಥಿತಿಯೂ ನನ್ನದಾಗಿದೆ’ ಎಂದರು.
‘ದೆಹಲಿಯ ಮುಖ್ಯಮಂತ್ರಿಯ ಹುದ್ದೆಯ ಕುರ್ಚಿಯು ಕೇಜ್ರಿವಾಲ್‌ಗೆ ಸೇರಿದ್ದಾಗಿದೆ. ಆ ಕುರ್ಚಿಯು ಕೊಠಡಿಯಲ್ಲಿ ಹಾಗೆಯೇ ಇರಲಿದ್ದು, ಅವರಿಗಾಗಿ ಕಾದು ಕೂತಿದೆ’ ಎಂದರು.
‘ಭಗವಾನ್ ಶ್ರೀರಾಮನ ಮರದ ಚಪ್ಪಲಿಗಳನ್ನು ಸಿಂಹಾಸನದ ಮೇಲಿರಿಸಿ, 14 ವರ್ಷಗಳ ಕಾಲ ಅಯೋಧ್ಯೆಯಲ್ಲಿ ಭರತ ಆಡಳಿತ ನಡೆಸಿದಂತೆ ಮುಂದಿನ ನಾಲ್ಕು ತಿಂಗಳ ಕಾಲ ದೆಹಲಿ ಸರ್ಕಾರದ ಆಡಳಿತ ನಡೆಸಲಿದ್ದೇನೆ. ತಂದೆಯ ಆಸೆಯನ್ನು ಈಡೇರಿಸಿದ್ದರಿಂದಲೇ, ಭಗವಾನ್ ರಾಮನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಯಲಾಗುತ್ತದೆ. ಅವರ ಜೀವನ ಘನತೆ ಹಾಗೂ ನೈತಿಕತೆಗೆ ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ದೇಶದ ರಾಜಕಾರಣದಲ್ಲಿ ಘನತೆ ಹಾಗೂ ನೈತಿಕತೆಯ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ’ ಎಂದು ಪ್ರಶಂಸಿದರು. ಬಿಜೆಪಿಗೆ ಕೇಜ್ರಿವಾಲ್ ಅವರ ವರ್ಚಸ್ಸು ಹಾಳು ಮಾಡಲು ಇನ್ನು ಮುಂದೆ ಯಾವುದೇ ಮಾರ್ಗ ಉಳಿದಿಲ್ಲ’ ಎಂದು ತಿರುಗೇಟು ನೀಡಿದರು.
‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ, ಅವರಿಗೆ ಮುಖ್ಯಮಂತ್ರಿಗಳ ಕಚೇರಿಗೆ ಪ್ರವೇಶ ಅಥವಾ ಕಡತಗಳಿಗೆ ಸಹಿ ಹಾಕುವುದಕ್ಕೆ ನಿರ್ಬಂಧ ಹೇರಿತ್ತು. ಬೇರೆ ಯಾರಾದರೂ ಆಗಿದ್ದರೆ, ಅವರ ನಿರ್ಧಾರ ಬೇರೆ ಇರುತ್ತಿತ್ತು. ಕೇಜ್ರಿವಾಲ್ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡರು’ ಎಂದು ಅತಿಶಿ ತಿಳಿಸಿದರು.
ಸಂಪುಟದ ಉಳಿದ ಸದಸ್ಯರು ಸಹ ಸೋಮವಾರವೇ ಅಧಿಕಾರ ಸ್ವೀಕರಿಸಿದರು.
ಕೇಜ್ರಿವಾಲ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ವೇಳೆ ಇದ್ದ ಶಿಕ್ಷಣ, ಕಂದಾಯ, ಹಣಕಾಸು, ಇಂಧನ, ಲೋಕೋಪಯೋಗಿ ಸೇರಿದಂತೆ ವೇಳೆ 13 ಖಾತೆಗಳನ್ನು ಅತಿಶಿ ಹಾಗೆಯೇ ಉಳಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಅವಮಾನ: ಬಿಜೆಪಿ
ಕೇಜ್ರಿವಾಲ್ ಬಳಸುತ್ತಿದ್ದ ಕುರ್ಚಿಯನ್ನು ಆತಿಶಿ ಬಳಸದ ನಿರ್ಧಾರವನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿಯು ತೀವ್ರವಾಗಿ ಟೀಕಿಸಿದೆ.
‘ಅವರು ಏನು ಮಾಡಿದ್ದಾರೋ ಅದು ಸರಿಯಾದ ಮಾದರಿಯಲ್ಲ. ಅವರ ನಡವಳಿಕೆಯು ಮುಖ್ಯಮಂತ್ರಿ ಹುದ್ದೆಗಷ್ಟೇ ಅವಮಾನ ಮಾಡಿಲ್ಲ ದೆಹಲಿಯ ಜನರ ಭಾವನೆಗಳ ಮೇಲೂ ಗಾಸಿ ಉಂಟು ಮಾಡಿದೆ. ರಿಮೋಟ್ ಕಂಟ್ರೋಲ್ ಮೂಲಕ ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಾರೆಯೇ ಎಂಬುದರ ಕುರಿತು ಅರವಿಂದ ಕೇಜ್ರಿವಾಲ್ ಉತ್ತರಿಸಬೇಕು’ ಎಂದು ದೆಹಲಿಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿರೇಂದ್ರ ಸಚ್‌ದೇವ ಒತ್ತಾಯಿಸಿದ್ದಾರೆ.
ಡಮ್ಮಿ ಸಿ.ಎಂ: ಕಾಂಗ್ರೆಸ್
ಅತಿಶಿ ಅವರು ತನ್ನನ್ನು ತಾನು ‘ಡಮ್ಮಿ’ ಮುಖ್ಯಮಂತ್ರಿ ಎಂಬುದನ್ನು ನಿರೂಪಿಸಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವೇಂದರ್ ಯಾದವ್ ತಿಳಿಸಿದರು.
‘ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾದ ವ್ಯಕ್ತಿಯನ್ನು ಭಗವಾನ್ ಶ್ರೀರಾಮನಿಗೆ ಹೋಲಿಕೆ ಮಾಡಿರುವುದನ್ನು ಕಟುವಾಗಿ ಖಂಡಿಸುತ್ತೇನೆ. ಡಮ್ಮಿ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವುದರಲ್ಲಿ ಆತಿಶಿ ಅವರು ಎಲ್ಲ ಮಿತಿಗಳನ್ನು ಮೀರಿದ್ದಾರೆ’ ಎಂದು ಯಾದವ್ ಕಿಡಿಕಾರಿದ್ದಾರೆ.
‘ಅತಿಶಿ ನಡೆಯಿಂದ ಅವರ ಸರ್ಕಾರದಿಂದ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ’ ಎಂದು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಸಂವಿಧಾನಕ್ಕೆ ಅವಮಾನ ಮಾಡಿದ್ದು ಅತಿಶಿ ಕೈಗೊಂಬೆ ಮುಖ್ಯಮಂತ್ರಿ ಎಂಬುದನ್ನು ನಿರೂಪಿಸಿದ್ದಾರೆ.ಮನೋಜ್ ತಿವಾರಿ, ದೆಹಲಿಯ ಈಶಾನ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ
आज मैंने दिल्ली के मुख्यमंत्री की ज़िम्मेदारी सँभाली है। आज मेरे मन में वो ही व्यथा है जो भरत के मन में थी जब उनके बड़े भाई भगवान श्री राम 14 साल के वनवास पर गए थे, और भरत जी को अयोध्या का शासन सँभालना पड़ा था। जैसे भरत ने 14 साल भगवान श्री राम की खड़ाऊँ रख कर अयोध्या का शासन… pic.twitter.com/OkNEgtYIq4
— Atishi (@AtishiAAP) September 23, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.