ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರದ್‌ ಪವಾರ್ ‘ಶಿವಸೈನಿಕರ' ಗುರುವಾಗಲು ಸಾಧ್ಯವಿಲ್ಲ: ಶಿವಸೇನಾದ ಅನಂತ್‌ ಗೀತೆ

Last Updated 21 ಸೆಪ್ಟೆಂಬರ್ 2021, 7:13 IST
ಅಕ್ಷರ ಗಾತ್ರ

ಮುಂಬೈ: ಕಾಂಗ್ರೆಸ್‌ ಪಕ್ಷಕ್ಕೆ ಮೋಸ ಮಾಡಿ ಹೊಸ ಪಕ್ಷ ಸ್ಥಾಪಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಅವರು ‘ಶಿವಸೈನಿಕರ'ಗುರುವಾಗಲು ಸಾಧ್ಯವಿಲ್ಲ ಎಂದು ಶಿವಸೇನಾ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಅನಂತ್‌ ಗೀತೆ ಹೇಳಿದ್ದಾರೆ.

ತನ್ನ ಸ್ವಕ್ಷೇತ್ರ ರಾಯಗಡದಲ್ಲಿ ಸೋಮವಾರ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಶರದ್ ಪವಾರ್ ಎಂದೂ ನಮ್ಮ ನಾಯಕರಾಗಲು ಸಾಧ್ಯವಿಲ್ಲ. ಕೇವಲ ಹೊಂದಾಣಿಕೆಯಿಂದ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸೇರಿ ತ್ರಿಪಕ್ಷೀಯ ಮಹಾ ವಿಕಾಸ ಅಘಾಡಿ (ಎಂವಿಎ) ಒಕ್ಕೂಟ ಸರ್ಕಾರ ರಚನೆಯಾಗಿದೆ, ಅಷ್ಟೇ‘ ಎಂದು ಹೇಳಿದರು.

ಹಿಂದಿನ ಅವಧಿಯಲ್ಲಿ‌ ಜಂಟಿಯಾಗಿ ಆಡಳಿತ ನಡೆಸಿದ್ದ ಬಿಜೆಪಿ– ಶಿವಸೇನಾ ಪಕ್ಷಗಳು, 2019ರ ವಿಧಾನಸಭಾ ಚುನಾವಣೆ ನಂತರ, ಅಧಿಕಾರದ ಹೊಂದಾಣಿಕೆಯಲ್ಲಿ ಒಮ್ಮತ ಮೂಡದೇ ಮೈತ್ರಿ ಕಡಿದುಕೊಂಡವು. ನಂತರ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಅವರು, ಕಾಂಗ್ರೆಸ್, ಶಿವಸೇನಾ ಮತ್ತು ಎನ್‌ಸಿಪಿ ಮೈತ್ರಿಕೂಟದ ಮಹಾ ವಿಕಾಸ ಆಘಾಡಿ(ಎಂವಿಎ) ಒಕ್ಕೂಟ ಸರ್ಕಾರ ರಚನೆಗೆ ಮುಂದಾದರು. ಹಾಗಾಗಿ ಅವರನ್ನು ‘ಎಂವಿಎ ಮೈತ್ರಿಕೂಟ ಸರ್ಕಾರದ ವಾಸ್ತುಶಿಲ್ಪಿ‘ ಎಂದು ಪರಿಗಣಿಸಲಾಗಿತ್ತು.

ಇದನ್ನು ಉಲ್ಲೇಖಿಸಿದ ಗೀತೆ, ‘ಜನರು ಪವಾರ್ ಅವರನ್ನು ಯಾವ ರೀತಿಯಲ್ಲಾದರೂ ಬೇಕಾದರೂ ಕರೆಯಲಿ, ಆದರೆ ನಮ್ಮ ಗುರು, ಬಾಳಾಸಾಹೇಬ್‌ ಠಾಕ್ರೆ ಮಾತ್ರ. ಈ ಸರ್ಕಾರ ಇರುವವರೆಗೂ ಮೈತ್ರಿ ಮುಂದುವರಿಯುತ್ತದೆ. ಮೈತ್ರಿಕೂಟದ ಪಕ್ಷಗಳು ಬೇರೆಯಾದ ಮೇಲೆ ನಾವು ನಮ್ಮ ಮನೆಯಾದ ಶಿವಸೇನಾ ಪಕ್ಷದ ಜೊತೆಗೆ ಹೋಗುತ್ತೇವೆ‘ ಎಂದು ಹೇಳಿದರು.

‘ಶಿವಸೇನಾ ನೇತೃತ್ವದ ಮೈತ್ರಿಕೂಟ ಸರ್ಕಾರದ ಬಗ್ಗೆ ತಾವು ಯಾವುದೇ ಕೆಟ್ಟ ಅಭಿಪ್ರಾಯವನ್ನು ಹೊಂದಿಲ್ಲ. ಈ ಸರ್ಕಾರ ಯಶಸ್ವಿಯಾಗಬೇಕೆಂದು ಬಯಸಿದ್ದೇನೆ‘ ಎಂದು ಗೀತೆ ಹೇಳಿದರು.

‘ಪವಾರ್ ಅವರು ತಮ್ಮ ಪಕ್ಷವನ್ನು ಸ್ಥಾಪಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮೋಸಮಾಡಿದರು. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಹೇಗೆ ಒಂದಾಗಲು ಸಾಧ್ಯವಿಲ್ಲವೋ, ಹಾಗೆಯೇ ಶಿವಸೇನಾ ಕೂಡ ಕಾಂಗ್ರೆಸ್‌ ನೀತಿಯನ್ನು ಸಂಪೂರ್ಣವಾಗಿ ಪಾಲಿಸಲು ಸಾಧ್ಯವಿಲ್ಲ‘ ಎಂದರು. ‘ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವಿನ ಸಂಬಂಧ ಯಾವಾಗಲೂ ಸೌಹಾರ್ದಯುತವಾಗಿಲ್ಲ‘ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT