ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ಸಂಸದ ಹತ್ಯೆ ಪ್ರಕರಣ: ಆರೋಪಿ ಬಂಧನ

ಕೃತ್ಯದಲ್ಲಿ ಇತರ ನಾಲ್ವರು ಆರೋಪಿಗಳಿಗೆ ನೆರವಾಗಿದ್ದ ಆರೋಪಿ * ಸಂಸದರ ದೇಹ ತುಂಡರಿಸಲು ಸಹಾಯ
Published 24 ಮೇ 2024, 14:12 IST
Last Updated 24 ಮೇ 2024, 14:12 IST
ಅಕ್ಷರ ಗಾತ್ರ

ಕೋಲ್ಕತ್ತ: ಬಾಂಗ್ಲಾದೇಶದ ಅವಾಮಿ ಲೀಗ್‌ ಪಕ್ಷದ ಸಂಸದ ಅನ್ವರುಲ್‌ ಅಜೀಂ ಅನಾರ್‌ ಹತ್ಯೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ಉತ್ತರ 24 ಪರಗಣ ಜಿಲ್ಲೆಯ ಬೊಂಗಾವ್‌ ಪ್ರದೇಶದಲ್ಲಿ ಮಾಂಸ ವ್ಯಾಪಾರಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕೊಲೆಯಾದ ವ್ಯಕ್ತಿಯ ದೇಹವನ್ನು ಹಲವು ಭಾಗಗಳಾಗಿ ತುಂಡರಿಸಲು ಹಾಗೂ ಅದನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ವಿವಿಧ ಸ್ಥಳಗಳಲ್ಲಿ ಎಸೆಯಲು, ಇತರ ನಾಲ್ವರು ಆರೋಪಿಗಳಿಗೆ ನೆರವು ನೀಡಿದ್ದಾಗಿ ಈ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಯು ಬಾಂಗ್ಲಾದೇಶದ ಪ್ರಜೆಯಾಗಿದ್ದು, ವೃತ್ತಿಯಲ್ಲಿ ಮಾಂಸ ವ್ಯಾಪಾರಿ. ಆತ ಅಕ್ರಮವಾಗಿ ಭಾರತಕ್ಕೆ ಬಂದು, ತನ್ನ ನೈಜ ಗುರುತನ್ನು ಮರೆ ಮಾಚಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ. ಅನ್ವರುಲ್‌ ಅವರನ್ನು ಕೊಲ್ಲುವ ಯೋಜನೆಯ ಭಾಗವಾಗಿ ಎರಡು ತಿಂಗಳ ಹಿಂದೆ ಈತನನ್ನು ಕೋಲ್ಕತ್ತಕ್ಕೆ ಕರೆಸಿಕೊಳ್ಳಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಸಿಐಡಿ ಅಧಿಕಾರಿಗಳ ತಂಡವು ಆರೋಪಿಯನ್ನು ಭಂಗಾರ್‌ ಪ್ರದೇಶಕ್ಕೆ ಕರೆದೊಯ್ದು, ಸಂಸದ ಅನ್ವರುಲ್‌ ಅವರ ದೇಹದ ಭಾಗಗಳಿಗಾಗಿ ಶುಕ್ರವಾರ ಶೋಧ ನಡೆಸಿತು. ಬಳಿಕ ಆರೋಪಿಯನ್‌ ಬರಾಸತ್‌ನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. 

ಸಂಸದರ ಆಪ್ತ ಸ್ನೇಹಿತ, ಅಮೆರಿಕದ ಪ್ರಜೆ ಅಖ್ತರುಝಾಮಾನ್‌ ಅವರು ಈ ಕೊಲೆಯಲ್ಲಿ ಭಾಗಿಯಾದವರಿಗೆ ಸುಮಾರು ₹ 5 ಕೋಟಿ ನೀಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಸಂಸದರ ಸ್ನೇಹಿತ ಕೋಲ್ಕತ್ತದಲ್ಲಿ ಫ್ಲಾಟ್‌ ಹೊಂದಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳ ವಿಚಾರಣೆ ಸಲುವಾಗಿ ಪಶ್ಚಿಮ ಬಂಗಾಳದ ಸಿಐಡಿ ತಂಡ ಗುರುವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಿದೆ.

ಲಭ್ಯ ಪುರಾವೆಗಳ ಪ್ರಕಾರ, ಸಂಸದರನ್ನು ಕತ್ತು ಹಿಸುಕಿ ಕೊಂದು, ಬಳಿಕ ಅವರ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.  ಮೇ 13ರಂದು ಕೋಲ್ತತ್ತದಿಂದ ನಾಪತ್ತೆಯಾಗಿದ್ದ ಅನ್ವರುಲ್‌ ಅವರು ಹತ್ಯೆಯಾಗಿರುವ ಬಗ್ಗೆ ಪೊಲೀಸರು ಬುಧವಾರ ಖಚಿತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT