ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದಲ್ಲಿ ಹನಿಟ್ರ್ಯಾಪ್‌ಗೆ ಕೆಡವಿ ಬಾಂಗ್ಲಾದೇಶ ಸಂಸದನ ಹತ್ಯೆ!

ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್‌ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಗುರುವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
Published 24 ಮೇ 2024, 10:27 IST
Last Updated 24 ಮೇ 2024, 10:27 IST
ಅಕ್ಷರ ಗಾತ್ರ

ಕೋಲ್ಕತ್ತ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್‌ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಗುರುವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಅನ್ವರುಲ್ ಅಜೀಂ ಅನಾರ್‌ ಅವರು ಸಾಯುವ ಮುನ್ನ ಹನಿ ಟ್ರ್ಯಾಪ್‌ಗೆ ಒಳಗಾಗಿದ್ದರು. ಬಂಧಿತನು ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವಂತೆ ಪಶ್ಚಿಮ ಬಂಗಾಳದ ವಾಸಿಯಾಗಿದ್ದು ಈಗಾಗಲೇ ಬಂಗ್ಲಾದಲ್ಲಿ ಬಂಧನಕ್ಕೆ ಒಳಗಾಗಿರುವ ಮುಖ್ಯ ಆರೋಪಿಗೆ ಪರಿಚಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್‌ ಅವರು ಚಿಕಿತ್ಸೆಗೆಂದು ಕೋಲ್ಕತ್ತಕ್ಕೆ ಬಂದು ಮೇ 18ರಂದು ಕಾಣೆಯಾಗಿದ್ದರು. ಅವರ ಮೃತದೇಹ ಮೇ 22ರಂದು ಕೋಲ್ಕತ್ತದ ಅಪಾರ್ಟ್‌ಮೆಂಟ್ ಒಂದರಲ್ಲಿ ಪತ್ತೆಯಾಗಿತ್ತು. ಅಂದೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಮಹಿಳೆಯೊಬ್ಬರು ಅನಾರ್ ಅವರನ್ನು ಮೇ 16ರಂದು ಕೋಲ್ಕತ್ತದ ನ್ಯೂ ಟೌನ್ ಫ್ಲಾಟ್‌ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರ ಹಿಂದೆ ಇದೆ ಫ್ಲಾಟ್‌ಗೆ ವ್ಯಕ್ತಿಯೊಬ್ಬ ಹೋಗಿದ್ದ. ಮಾರನೇ ದಿನ ಅನಾರ್ ಅವರು ಹೊರಗೆ ಬರುವುದು ಸಿಸಿಟಿವಿಯಲ್ಲಿ ಕಂಡಿಲ್ಲ. ನಂತರ ಮಹಿಳೆ ಹಾಗೂ ಆ ವ್ಯಕ್ತಿ ಅಷ್ಟೇ ದೊಡ್ಡ ಬ್ಯಾಗ್‌ ಸಮೇತ ಹೊರಗೆ ಬಂದಿರುವುದು ಕಂಡಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಫ್ಲಾಟ್‌ನ ತಪಾಸಣೆ ನಡೆಸಿದ ಪೊಲೀಸರಿಗೆ ಅನಾರ್ ಅವರ ಮೃತ ದೇಹ ಹಲವು ತುಂಡುಗಳು ಪತ್ತೆಯಾಗಿವೆ. ಅನಾರ್ ಅವರನ್ನು ತುಂಡು ತುಂಡಾಗಿ ಕತ್ತರಿಸಿರುವುದು ಗೊತ್ತಾಗಿದೆ. ಆರೋಪಿಗಳು ರಸಾಯನಿಕಗಳಿಂದ ಸಾಕ್ಷ್ಯಗಳನ್ನು ಅಳಿಸಿಹಾಕಿದ್ದರು. ಬಳಿಕ ಅನಾರ್ ದೇಹದ ಭಾಗಗಳನ್ನು ಬೇರೆಡೆ ಸಾಗಿಸಲಾಗಿತ್ತು. ಕೊಲೆ ಮಾಡುವ ಉದ್ದೇಶದಿಂದಲೇ ಆ ಮಹಿಳೆ ಅನಾರ್ ಅವರನ್ನು ಪುಸಲಾಯಿಸಿ ಫ್ಲಾಟ್‌ಗೆ ಕರೆದುಕೊಂಡು ಹೋಗಿದ್ದಳು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂ ಟೌನ್ ಫ್ಲಾಟ್‌ ಅನಾರ್ ಅವರ ಸ್ನೇಹಿತರೊಬ್ಬರಿಗೆ ಸೇರಿದೆ ಎನ್ನಲಾಗಿದ್ದು ಸದ್ಯ ಅವರು ಅಮೆರಿಕ ವಾಸಿ ಎಂದು ತಿಳಿದು ಬಂದಿದೆ. ಅನಾರ್ ಅವರನ್ನು ಕೊಲ್ಲಲು ಸುಪಾರಿ ಕಿಲ್ಲರ್‌ಗಳಿಗೆ ₹5ಕೋಟಿ ಕೊಡಲಾಗಿತ್ತು. ಮಹಿಳೆ ಹಾಗೂ ಅವರ ಜೊತೆ ಇದ್ದ ವ್ಯಕ್ತಿಯ ಬಂಧನಕ್ಕೆ ತೀವ್ರ ತಪಾಸಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

‘ಅವಾಮಿ ಲೀಗ್‌ನ ಸಂಸದ ಅನ್ವರುಲ್‌ ಅವರು ಕೋಲ್ಕತ್ತದ ಫ್ಲಾಟ್‌ವೊಂದರಲ್ಲಿ ಕೊಲೆಯಾಗಿದ್ದಾರೆ. ಕೊಲೆ ಮಾಡಿದ ಆರೋಪಿಗಳೆಲ್ಲರೂ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ಇದೊಂದು ಯೋಜಿತ ಕೃತ್ಯವಾಗಿದೆ’ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಜ್ಮಾನ್‌ ಖಾನ್  ಅವರು ಬುಧವಾರ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT