ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಭವನಕ್ಕೆ ನಿಯೋಜಿಸಿದ್ದ ಕೋಲ್ಕತ್ತ ಪೊಲೀಸರಿಗೆ ರಾಜ್ಯಪಾಲರ ಗೇಟ್‌ಪಾಸ್‌

Published 17 ಜೂನ್ 2024, 14:09 IST
Last Updated 17 ಜೂನ್ 2024, 14:09 IST
ಅಕ್ಷರ ಗಾತ್ರ

ಕೋಲ್ಕತ್ತ: ‘ರಾಜಭವನಕ್ಕೆ ನಿಯೋಜಿಸಿರುವ ಕೋಲ್ಕತ್ತ ಪೊಲೀಸರು ತಕ್ಷಣವೇ ಆವರಣದಿಂದ ಖಾಲಿ ಮಾಡಬೇಕು’ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಸೂಚನೆ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ರಾಜಭವನದ ಉತ್ತರ ದ್ವಾರದಲ್ಲಿರುವ ಪೊಲೀಸ್‌ ಹೊರಠಾಣೆಯನ್ನು ‘ಜನಮಂಚ್‌‘ (ಸಾರ್ವಜನಿಕರ ಅಹವಾಲು ಸ್ವೀಕಾರ ಕೇಂದ್ರ)ಆಗಿ ಮಾರ್ಪಾಡು ಮಾಡಲು ರಾಜ್ಯಪಾಲರು ಯೋಜನೆ ಹೊಂದಿದ್ದಾರೆ’ ಎಂದರು.

‘ರಾಜಭವನದ ಒಳಭಾಗದಲ್ಲಿರುವ ಪೊಲೀಸರು, ಪ್ರಭಾರ ಅಧಿಕಾರಿ ಸೇರಿದಂತೆ ಎಲ್ಲರಿಗೂ ಇದೇ ಸೂಚನೆ ನೀಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ನಡೆದಿದ್ದ ವ್ಯಾಪ‍ಕ ಹಿಂಸಾಚಾರ ಕುರಿತಂತೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ನೇತೃತ್ವದ ನಿಯೋಗವು ದೂರು ನೀಡಲು ತೆರಳಿದ್ದ ವೇಳೆ ರಾಜ್ಯಪಾಲರು ನೀಡಿದ್ದ ಅನುಮತಿ ಹೊರತಾಗಿಯೂ ಪೊಲೀಸರು ತಡೆಯೊಡ್ಡಿದ್ದರು. ಇದರ ಬೆನ್ನಲ್ಲೇ, ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರಾಜಭವನದ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸದಂತೆ ತಡೆಯಲು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ಸೆಕ್ಷನ್‌ 144 ಜಾರಿಗೊಳಿಸಿತ್ತು. ಇದರ ನಡುವೆಯೇ ನಿಯೋಗದೊಂದಿಗೆ ತೆರಳಲು ಸುವೇಂದು ಮುಂದಾದಾಗ ಪೊಲೀಸರು ತಡೆಯೊಡ್ಡಿದ್ದರು.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದ ರಾಜ್ಯಪಾಲರು,‘ಮುಂಚಿತವಾಗಿ ಅನುಮತಿ ನೀಡಿದ್ದ ಹೊರತಾಗಿಯೂ ಯಾವ ಆಧಾರದಲ್ಲಿ ಸುವೇಂದು ಅಧಿಕಾರಿಗೆ ರಾಜಭವನ ಪ್ರವೇಶಿದಂತೆ ತಡೆಯಲಾಗಿತ್ತು’ ಎಂದು ಪ್ರಶ್ನಿಸಿದ್ದರು.

ಈ ವಿಷಯವನ್ನು ಸುವೇಂದು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್‌ ‘ರಾಜ್ಯಪಾಲರನ್ನು ಗೃಹ ಬಂಧನದಲ್ಲಿ ಇಡಲಾಗಿದೆಯೇ’ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT