ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ರಸ್ತೆ ಮೇಲೆ ನಿರ್ಭೀತಿಯಿಂದ ಓಡಾಡುವ ಹುಲಿ: ಜೈರಾಮ್‌ ರಮೇಶ್‌

Last Updated 2 ನವೆಂಬರ್ 2022, 13:23 IST
ಅಕ್ಷರ ಗಾತ್ರ

ಹೈದರಾಬಾದ್‌: ‘ರಾಹುಲ್‌ ಗಾಂಧಿ ಅವರನ್ನು ಕೆಲವರು ‘ಕೋಣೆಯೊಳಗಿನ ಆನೆ’ ಎಂದು ಕರೆಯುತ್ತಾರೆ. ಆದರೆ ಅವರು ರಸ್ತೆ ಮೇಲೆ ನಿರ್ಭೀತಿಯಿಂದ ಓಡಾಡುವ ಹುಲಿ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಬುಧವಾರ ಹೇಳಿದ್ದಾರೆ.

ತೆಲಂಗಾಣದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿರುವ ಅವರು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

‘ರಾಹುಲ್‌ ಅವರನ್ನು 18 ವರ್ಷಗಳಿಂದ ಬಹಳ ಹತ್ತಿರದಿಂದಲೇ ನೋಡಿದ್ದೇನೆ. ಅವರು ಹಿಂಬದಿಯ ಸವಾರನಾಗಲು ಇಷ್ಟಪಡುವುದಿಲ್ಲ. ತಮ್ಮ ಸ್ಥಾನವನ್ನು ಪ್ರತಿಪಾದಿಸುವುದಕ್ಕೂ ಬಯಸುವುದಿಲ್ಲ. ಅವರು ಅತ್ಯಂತ ಪ್ರಜಾಸತ್ತಾತ್ಮಕ ವ್ಯಕ್ತಿ’ ಎಂದು ಪ್ರಶಂಸಿಸಿದ್ದಾರೆ.

‘ಭಾರತ್ ಜೋಡೊ ಯಾತ್ರೆಯು ಪಕ್ಷದ ಪಾಲಿಗೆ ಬೂಸ್ಟರ್‌ ಡೋಸ್‌ ಆಗಿ ಪರಿಣಮಿಸಲಿದೆ. ಪಕ್ಷದ ಸಂಘಟನೆಗೆ ಬಲ ತುಂಬಲಿದೆ. ಯಾತ್ರೆ ಶುರುವಾದ ಬಳಿಕ ಪಕ್ಷದ ಮನೋಬಲ ಉತ್ತುಂಗದಲ್ಲಿದೆ’ ಎಂದಿದ್ದಾರೆ.

‘ರಾಹುಲ್‌ ಅವರ ಮೌಲ್ಯಗಳು ಪಕ್ಷಕ್ಕೆ ಸೈದ್ಧಾಂತಿಕ ದಿಕ್ಸೂಚಿ ತೋರುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಯಾತ್ರೆಯು ಅವಕಾಶದ ಬಾಗಿಲನ್ನು ತೆರೆದಿದೆ’ ಎಂದೂ ತಿಳಿಸಿದ್ದಾರೆ.

‘ಯಾತ್ರೆಯ ಮೂಲಕ ರಾಹುಲ್‌ ಅವರು ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಪ್ರತಿದಿನ 22 ಕಿ.ಮೀ. ನಡೆಯುತ್ತಿದ್ದಾರೆ. ಸಾವಿರಾರು ಮಂದಿಯನ್ನು ಭೇಟಿಯಾಗುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಂವಾದ ನಡೆಸಿ ಅವರ ಅಭಿಪ್ರಾಯಗಳನ್ನು ಆಲಿಸುತ್ತಿದ್ದಾರೆ. ಯಾತ್ರೆ ಮುಗಿದ ಬಳಿಕ ಜನರು ರಾಹುಲ್‌ ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ’ ಎಂದು ಹೇಳಿದ್ದಾರೆ.

‘ಯಾತ್ರೆಯಿಂದ ಕ್ರಾಂತಿ ಸೃಷ್ಟಿಯಾಗುತ್ತಿದೆ’
‘ಭಾರತ್‌ ಜೋಡೊ ಯಾತ್ರೆಯು ಸದ್ದಿಲ್ಲದೆ ಕ್ರಾಂತಿ ಸೃಷ್ಟಿಸುತ್ತಿದ್ದು, ರಾಜಕೀಯ ರಂಗದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ’ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ತೆಲಂಗಾಣದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ಪಾಲ್ಗೊಂಡಿರುವ ಅವರು ಭಾರತ್‌ ಯಾತ್ರಿಗಳೊಂದಿಗೆ ಬುಧವಾರ ಬೊವೆನಪಲ್ಲಿಯಲ್ಲಿ ಸಂವಾದ ನಡೆಸಿದರು.

ರಾಹುಲ್‌ ಜೊತೆ ಹೆಜ್ಜೆ ಹಾಕಿದ ಪೂಜಾ ಭಟ್‌
ಭಾರತ್‌ ಜೋಡೊ ಯಾತ್ರೆಯು ತೆಲಂಗಾಣದಲ್ಲಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ನಟಿ ಹಾಗೂ ಚಲನಚಿತ್ರ ನಿರ್ಮಾಪಕಿ ಪೂಜಾ ಭಟ್‌ ಅವರು ಬುಧವಾರ ಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ರಾಹುಲ್‌ ಜೊತೆ ಕೆಲ ದೂರ ಹೆಜ್ಜೆ ಹಾಕಿದ ಪೂಜಾ, ಕಾಂಗ್ರೆಸ್‌ ನಾಯಕನ ಜೊತೆ ಗಹನವಾಗಿ ಚರ್ಚಿಸುತ್ತಿದ್ದುದೂ ಕಂಡುಬಂತು.

‘ಹೈದರಾಬಾದ್‌ನ ಬಾಲನಗರ ಮುಖ್ಯರಸ್ತೆ ಬಳಿಯ ಎಂಜಿಬಿ ಬಜಾಜ್‌ ಶೋರೂಂನಿಂದ ಬುಧವಾರ ಯಾತ್ರೆ ಆರಂಭಗೊಂಡಿತ್ತು. ಯಾತ್ರಿಗಳು ಒಟ್ಟು 28 ಕಿ.ಮೀ. ಕ್ರಮಿಸಿದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT