ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಹಿಂಸಾಕೃತ್ಯದ ಪ್ರತಿಧ್ವನಿ, ಕಲಾಪಕ್ಕೆ ಅಡ್ಡಿ

ಹಿಂಸೆಗೆ ಬಿಜೆಪಿ ಸಂಚು ಕಾರಣ –ಸರ್ಕಾರ * ಮೊದಲೇ ಏಕೆ ಹೇಳಲಿಲ್ಲ –ಬಿಜೆಪಿ ಪ್ರಶ್ನೆ
Last Updated 3 ಏಪ್ರಿಲ್ 2023, 14:28 IST
ಅಕ್ಷರ ಗಾತ್ರ

ಪಟ್ನಾ: ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಬಿಹಾರದ ವಿವಿಧೆಡೆ ನಡೆದ ಹಿಂಸಾಚಾರ ಕೃತ್ಯಗಳು ಸೋಮವಾರ ವಿಧಾನಸಭೆಯ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ಆಡಳಿತ–ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಗದ್ದಲದ ವಾತಾವರಣ ಮೂಡಿತು.

ಸದಸ್ಯರ ಆರೋಪ –ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಸ್ಪೀಕರ್‌ ಅವದ್ ಬಿಹಾರಿ ಚೌಧರಿ ಅವರು ದಿನದ ಕಲಾಪವನ್ನು ಮುಂದೂಡಬೇಕಾಯಿತು. ಬೆಳಿಗ್ಗೆ ಸದನ ಸೇರುತ್ತಿದ್ದಂತೆಯೇ ವಿರೋಧಪಕ್ಷ ಬಿಜೆಪಿಯ ಸದಸ್ಯರು, ವಿಷಯವನ್ನು ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದರು.

ಬಿಹಾರದ ಸಸರಂ ಮತ್ತು ಬಿಹಾರ ಶರೀಫ್‌ನಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಗುರುವಾರ ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು. ಅದರ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭಾನುವಾರ ಸಸರಂ ಪಟ್ಟಣಕ್ಕೆ ನೀಡಬೇಕಿದ್ದ ಭೇಟಿಯನ್ನು ರದ್ದುಪಡಿಸಿದ್ದರು.

‘ಹಿಂಸಾತ್ಮಕ ಕೃತ್ಯಗಳಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪಾತ್ರವಿದೆ‘ ಎಂದು ಆಡಳಿತರೂಢ ಮೈತ್ರಿಸರ್ಕಾರದ ಸದಸ್ಯರು ಆರೋಪಿಸಿದರು. ‘ಬಿಜೆಪಿ ಸರ್ಕಾರ ಬಂದರೆ ಹಿಂಸೆ ನಡೆಸಿದವರನ್ನು ತಲೆಕೆಳಗಾಗಿ ನೇತುಹಾಕುತ್ತೇವೆ’ ಎಂಬ ಶಾ ಅವರ ಹೇಳಿಕೆ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡರು.

ಎರಡೂ ಪಟ್ಟಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಮುಸಂಘರ್ಷ ನಡೆಯುವ ಸಾಧ್ಯತೆ ಇತ್ತು. ಆದರೆ, ಸ್ಥಳೀಯ ಆಡಳಿತವು ಸಕಾಲದಲ್ಲಿ ಮಧ್ಯ ಪ‍್ರವೇಶಿಸಿ ಆಗಬಹುದಾದ ಗಲಭೆಯನ್ನು ತಪ್ಪಿಸಿದೆ ಎಂದು ರಾಜ್ಯ ಸರ್ಕಾರವು ಪ್ರತಿಪಾದಿಸಿತ್ತು.

ಗದ್ದಲದ ನಡುವೆಯೇ ಹೇಳಿಕೆ ನೀಡಿದ ಸದನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ವಿಜಯಕುಮಾರ್‌ ಚೌಧರಿ, ‘ಕೇಂದ್ರ ಗೃಹ ಸಚಿವರು ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಮನವಿ ಮಾಡುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಅವರು ಬಳಸಿದ ಭಾಷೆ ಮತ್ತು ಭಾವನೆ ಗಮನಿಸಿದರೆ, ಲೋಕಸಭೆ ಚುನಾವಣೆ ಹತ್ತಿರ ಆಗುತ್ತಿರುವಂತೆಯೇ ಬಿಜೆಪಿ ಸದಸ್ಯರು ಸಂವೇದನೆಯನ್ನೇ ಕಳೆದುಕೊಂಡಂತಿದೆ’ ಎಂದು ಆರೋಪಿಸಿದರು.

ವಿಧಾನಸಭೆಯ ಹೊರಗೆ ಸುದ್ದಿಗಾರರ ಜೊತೆಗೆ ಮಾತನಾಡಿದ ಜೆಡಿಯು ಪಕ್ಷದ ನಾಯಕರು, ಕೇಂದ್ರ ಗೃಹ ಸಚಿವರು ಈ ವಿಷಯದಲ್ಲಿ ಅಗ್ಗದ ಪ್ರಚಾರ ಪಡೆಯಲು ಬಯಸುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿಯಾಗುವ ಕನಸು ಬಿಡಿ: ರಾಜ್ಯದ ಹಿತಾಸಕ್ತಿ ಗಮನಿಸಿ –ಬಿಜೆಪಿ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ ಎಂಬುದಕ್ಕೆ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಘಟನೆಗಳೇ ಸಾಕ್ಷಿ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ.

‘ನಿತೀಶ್‌ ಕುಮಾರ್ ಅವರು ಪ್ರಧಾನಿಯಾಗುವ ಕನಸು ಕಾಣುವುದನ್ನು ಬಿಟ್ಟು, ರಾಜ್ಯದ ಹಿತಾಸಕ್ತಿ ರಕ್ಷಿಸಲು ಗಮನನೀಡಲಿ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ಅವರು ಸುದ್ದಿಗೋಷ್ಠಿಯಲ್ಲಿ ಸಲಹೆ ಮಾಡಿದರು.

‘ಹಿಂಸಾತ್ಮಕ ಕೃತ್ಯಗಳಿಗೆ ಬಿಜೆಪಿ, ಆರ್‌ಎಸ್‌ಎಸ್‌ ಕಾರಣ ಎಂದು ಆರೋಪಿಸಿರುವ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಹಿಂಸೆಗೆ ಬಿಜೆಪಿ ನಡೆಸಿದ್ದ ಸಂಚು ಕಾರಣವಾಗಿದ್ದರೆ, ಸರ್ಕಾರ ಮೊದಲೇ ಏಕೆ ಅದನ್ನು ಬಹಿರಂಗಪಡಿಸಲಿಲ್ಲ‘ ಎಂದು ಪ್ರಶ್ನಿಸಿದರು.

‘17 ವರ್ಷಗಳ ಆಡಳಿತದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಮೊದಲ ಬಾರಿಗೆ ಗಲಭೆ ನಿಯಂತ್ರಿಸಲು ವಿಫಲರಾಗಿದ್ದಾರೆ. ಕಳೆದ ವರ್ಷ ಬಿಗಿ ಭದ್ರತೆ ಇದ್ದ ಕಾರಣ ಅಹಿತಕರ ಘಟನೆ ನಡೆಯಲಿಲ್ಲ. ಈ ವರ್ಷ ಏಕೆ ಬಿಗಿ ಭದ್ರತೆ ಕೈಗೊಂಡಿರಲಿಲ್ಲ‘ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT