ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನನ್ನು ನಿರ್ಲಕ್ಷಿಸಿಲ್ಲ: ‘ಇಂಡಿಯಾ’ ಸಭೆ ಬಳಿಕ ನಿತೀಶ್‌ ಪ್ರತಿಕ್ರಿಯೆ

Published 25 ಡಿಸೆಂಬರ್ 2023, 18:31 IST
Last Updated 25 ಡಿಸೆಂಬರ್ 2023, 18:31 IST
ಅಕ್ಷರ ಗಾತ್ರ

ಪಟ್ನಾ: ಕಳೆದ ವಾರ ದೆಹಲಿಯಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ತಾವು ಭಾವಿಸಿರುವುದಾಗಿ ಹರಡಿರುವ ವದಂತಿಗಳನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೋಮವಾರ ಅಲ್ಲಗಳೆದರು.

ಈ ಸಭೆಯಲ್ಲಿ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸೂಚಿಸಲಾಗಿತ್ತು. 

ಬಿಜೆಪಿಯನ್ನು ವಿರೋಧಿಸುವ ಪಕ್ಷಗಳನ್ನು ಒಂದೇ ವೇದಿಕೆಯಡಿ ತರಲು ಪ್ರಯತ್ನಿಸಿದ್ದು, ನನ್ನ ಸ್ವಂತ ಲಾಭಕ್ಕಾಗಿ ಏನನ್ನೂ ಬಯಸುವುದಿಲ್ಲ ಎಂದರು. ಆದರೆ ಸೀಟು ಹಂಚಿಕೆ ವಿಷಯವನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದ್ದಾಗಿ ಹೇಳಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಅಂಗವಾಗಿ ಗೌರವ ಸಲ್ಲಿಸಲು ಅವರ ಸ್ಮಾರಕದಬಳಿ ತೆರಳಿದ್ದಾಗ ಪತ್ರಕರ್ತರು ಕೇಳಿದಪ್ರಶ್ನೆಗಳಿಗೆ ಉತ್ತರಿಸಿ, ‘ನನಗೆ ನಿರಾಸೆಯಾಗಿಲ್ಲ, ಸಿಟ್ಟೂ ಬಂದಿಲ್ಲ’ ಎಂದರು.

‘ಸಭೆಯಲ್ಲಿ ನಾಯಕನ ಆಯ್ಕೆ ವಿಷಯ ಪ್ರಸ್ತಾಪವಾಯಿತು. ನನಗೆ ಆಸಕ್ತಿ ಇಲ್ಲ ಎಂದು ನಾನು ಸ್ಪಷ್ಟಪಡಿಸಿದ್ದೆ. ಆಗ ಮತ್ತೊಂದು ಹೆಸರು ಪ್ರಸ್ತಾಪವಾಯಿತು. ನನಗೆ ಸಹಮತವಿರುವುದಾಗಿ ನಾನು ಹೇಳಿದೆ’ ಎಂದು ಸಭೆಯಲ್ಲಿ ಕೇಜ್ರಿವಾಲ್‌ ಮತ್ತು ಮಮತಾ ಬ್ಯಾನರ್ಜಿ ಅವರು ಪ್ರಸ್ತಾಪಿಸಿದ ಖರ್ಗೆ ಅವರ ಹೆಸರು ಕುರಿತು ಹೇಳಿದರು.

ಪ್ರಧಾನಿಯಾಗಬೇಕೆಂಬ ನಿತೀಶ್‌ ಅವರ ಆಕಾಂಕ್ಷೆಯನ್ನು ಎಎಪಿಯ ಕೇಜ್ರಿವಾಲ್‌ ಮತ್ತು  ಟಿಎಂಸಿ ಮುಖ್ಯಸ್ಥೆ ಮಮತಾ ಅವರು ಹತ್ತಿಕ್ಕಿದ್ದಾರೆಂದು ಎನ್‌ಡಿಎಯಲ್ಲಿರುವ ಜೆಡಿ (ಯು) ಪಕ್ಷದ ಕೆಲ ನಾಯಕರು ಆರೋಪಿಸಿದ್ದರು.

'ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಬಗ್ಗೆ ಅವರು (ಬಿಜೆಪಿ ನಾಯಕರು) ಏನು ಹೇಳುವರು ಎಂಬ ಬಗ್ಗೆ ನಾನು ಗಮನ ಹರಿಸುವುದಿಲ್ಲ. ಅವರು ಏನು ಬೇಕೋ ಅದನ್ನು ಹೇಳಿಕೊಳ್ಳಲಿ. ಅದಕ್ಕೆ ಬೆಲೆ ಇಲ್ಲ. ರಾಜ್ಯದ ಸಮಗ್ರ ಬೆಳವಣಿಗೆ ಮಾತ್ರ ನಮ್ಮ ಕಳಕಳಿ’ ಎಂದು ಹೇಳಿದರು.

‘ಪಕ್ಷದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಪ್ರಗತಿ ಸಾಧಿಸುತ್ತಿರುವುದನ್ನು ನೋಡಿ. ನಾನು 10 ಲಕ್ಷ ಉದ್ಯೋಗದ ಭರವಸೆ ನೀಡಿದ್ದು, ಇದರಲ್ಲಿ ಅರ್ಧ ದಾರಿ ಸವೆಸಿದ್ದೇವೆ’ ಎಂದರು.

‘ನಾನು ಪತ್ರಕರ್ತರನ್ನು ಯಾವಾಗಲೂ ಗೌರವದಿಂದ ಕಂಡಿದ್ದೇನೆ. ಆದರೆ ಇಂದು ನೀವು ನಾವು ಮಾಡಿದ ಒಳ್ಳೆಯ ಕೆಲಸದ ಬಗ್ಗೆ  ಹೇಳುವುದಿಲ್ಲ. ಏಕೆಂದರೆ ನಿಮಗೆ ಮೇಲಿನಿಂದ ಒತ್ತಡ ಇದೆ. ಪರವಾಗಿಲ್ಲ ಬಿಡಿ, ಆಡಳಿತ ಬದಲಾದ ಹಾಗೆ ಎಲ್ಲವೂ ಬದಲಾಗುತ್ತದೆ’ ಎಂದು ನಿತೀಶ್‌ ಹೇಳಿದರು.

ದಿವಂಗತ ವಾಜಪೇಯಿ ಅವರ ಕುರಿತು ತಮಗಿದ್ದ ಗೌರವವನ್ನು ವಿವರಿಸಿದ ಅವರು, ‘ಅವರು ಅಧಿಕಾರದಲ್ಲಿದ್ದಾಗ ಯಾವ ಧರ್ಮದವರೂ ಆತಂಕ ಹೊಂದಿರಲಿಲ್ಲ’ ಎಂದರು.

ವಾಜಪೇಯಿ ಅವರ ಪಕ್ಷ ಬಿಜೆಪಿ ಈಗಲೂ ಎಲ್ಲರನ್ನೂ ಒಳಗೊಳ್ಳುವ ಹುಮ್ಮಸ್ಸು ಹೊಂದಿದೆಯೇ ಎಂದು ಕೇಳಿದಾಗ, ‘ಅರೆ, ನೀವೇನು ಮಾತನಾಡುತ್ತಾ ಇದ್ದೀರಾ’ ಎಂದರು.

ಸೀಟು ಹಂಚಿಕೆ ವಿಷಯ ಆದಷ್ಟು ಬೇಗ ಅಂತಿಮಗೊಳ್ಳಬೇಕು. ಎಲ್ಲಾ ರಾಜ್ಯಗಳಲ್ಲಿ ಸಕಾಲದಲ್ಲಿ ಇದು ಆಗುತ್ತದೆ ಎಂಬ ವಿಶ್ವಾಸ ಹೊಂದಿದ್ದೇನೆ.
ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT