ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜಫ್ಪರ್‌ಪುರ ದುರಂತ| ವಾರದೊಳಗೆ ಪ್ರತಿಕ್ರಿಯಿಸಿ: ಕೇಂದ್ರಕ್ಕೆ ‘ಸುಪ್ರೀಂ’

ಬಿಹಾರದಲ್ಲಿ ಮಿದುಳಿನ ಉರಿಯೂತದಿಂದ ಮಕ್ಕಳ ಸಾವು
Last Updated 24 ಜೂನ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಮಿದುಳಿನ ಉರಿಯೂತದಿಂದಾಗಿ ಬಿಹಾರದ ಮುಜಫ್ಪರ್‌ಪುರದಲ್ಲಿ ನೂರಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಏಳು ದಿನದೊಳಗಾಗಿ ಪ್ರತಿಕ್ರಿಯೆ ನೀಡಲು ಕೇಂದ್ರ ಹಾಗೂ ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಬಿ.ಆರ್.ಗವಾಯಿ ಅವರಿದ್ದ ‍ಪೀಠ ಈ ಸೂಚನೆ ನೀಡಿದೆ. ಮಿದುಳಿನ ಉರಿಯೂತದಿಂದ ಉತ್ತರ ಪ್ರದೇಶದಲ್ಲೂ ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಚಾರಣೆ ಸಂದರ್ಭದಲ್ಲಿ ವಕೀಲರೊಬ್ಬರು ನ್ಯಾಯಾಲಯದ ಗಮನಕ್ಕೆ ತಂದರು. ಈ ಸಂದರ್ಭದಲ್ಲಿಉತ್ತರ ಪ್ರದೇಶ ಸರ್ಕಾರವೂ ಈ ಕುರಿತು ವರದಿ ನೀಡಬೇಕು ಎಂದು ಪೀಠ ಆದೇಶಿಸಿದೆ.

ಪ್ರಮಾಣಪತ್ರ ಸಲ್ಲಿಸಲು ಸೂಚನೆ: ವಕೀಲರಾದ ಮನೋಹರ್‌ ಪ್ರತಾಪ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿವಿಚಾರಣೆ ನಡೆಸಿದ ಪೀಠ,ರಾಜ್ಯದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯ, ಸ್ವಚ್ಛತೆ, ಪೌಷ್ಠಿಕತೆ ಕುರಿತು ಪ‍್ರಮಾಣಪತ್ರ ಸಲ್ಲಿಸುವಂತೆ ಬಿಹಾರ ಸರ್ಕಾರಕ್ಕೆ ಪೀಠ ಸೂಚಿಸಿತು.

₹10 ಲಕ್ಷ ಪರಿಹಾರಕ್ಕೆ ಮನವಿ: ‘ಒಂದರಿಂದ ಹತ್ತು ವರ್ಷದ 126ಕ್ಕೂ ಅಧಿಕ ಮಕ್ಕಳು ಮೆದುಳಿನ ಉರಿಯೂತದಿಂದ ಮೃತಪಟ್ಟಿದ್ದಾರೆ. ದಿನ ಉರುಳಿದಂತೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಕ್ಕಳ ಸಾವಿಗೆ ಬಿಹಾರ, ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಸರ್ಕಾರ ಮೃತ ಮಕ್ಕಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು’ ಎಂದು ಅರ್ಜಿಯಲ್ಲಿ ಪ್ರತಾಪ್‌ ಉಲ್ಲೇಖಿಸಿದ್ದಾರೆ.10 ದಿನದ ನಂತರ ಮತ್ತೆ ವಿಚಾರಣೆ ನಡೆಯಲಿದೆ.

ಮತ್ತಿಬ್ಬರು ಮಕ್ಕಳ ಸಾವು

ಪಟ್ನಾ/ಮುಜಫ್ಫರ್‌ಪುರ(ಪಿಟಿಐ): ಬಿಹಾರದ ಮುಜಫ್ಫರ್‌ಪುರ ಜಿಲ್ಲೆಯಲ್ಲಿ ಭಾನುವಾರ ಮಿದುಳಿನ ಉರಿಯೂತದಿಂದ ಮತ್ತಿಬ್ಬರು ಮಕ್ಕಳು ಮೃತಪಟ್ಟಿದ್ದು, ಒಟ್ಟಾರೆ 20 ಜಿಲ್ಲೆಗಳಲ್ಲಿಮೃತಪಟ್ಟ ಮಕ್ಕಳ ಸಂಖ್ಯೆ 152ಕ್ಕೆ ಏರಿಕೆಯಾಗಿದೆ.ಎಸ್‌.ಕೆ.ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದರು. ಜೂನ್‌ 1ರ ನಂತರ ಈ ಆಸ್ಪತ್ರೆಗೆ ಒಟ್ಟು 431 ಮಕ್ಕಳು ಮಿದುಳಿನ ಉರಿಯೂತ ಚಿಕಿತ್ಸೆಗೆ ದಾಖಲಾಗಿದ್ದಾರೆ. ‘ಬಿಸಿಲ ಬೇಗೆ ಹೆಚ್ಚಿರುವ ಸಂದರ್ಭದಲ್ಲಿ ಈ ರೋಗ ಉಲ್ಭಣವಾಗುತ್ತದೆ. ಮಳೆ ಪ್ರಾರಂಭವಾಗುತ್ತಿದ್ದತೆಯೇ ಇಳಿಕೆಯಾಗುತ್ತದೆ. ಮಿದುಳಿನ ಉರಿಯೂತದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಇಳಿಕೆಯಾಗಿದೆ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಸುನಿಲ್‌ ಕುಮಾರ್‌ ಶಾಹಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಟೀಕೆ

ಬಿಹಾರದಲ್ಲಿನ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯವೈಖರಿಯನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ. ‘ಬಿಜೆಪಿಯ ಎರಡು ಎಂಜಿನ್‌ ಸರ್ಕಾರ ಹಾಗೂ ಬಿಹಾರ ಸರ್ಕಾರದ ಆಡಳಿತ ವೈಫಲ್ಯವೇ ಮಕ್ಕಳ ಸಾವಿಗೆ ನೇರ ಕಾರಣ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ಸಿಂಗ್ ಸುರ್ಜೇವಾಲ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT