ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ– ಬಿಜೆಡಿ ಮೈತ್ರಿಕೂಟ; ಶೀಘ್ರ ನಿರ್ಧಾರ ಸಾಧ್ಯತೆ

Published 13 ಮಾರ್ಚ್ 2024, 16:14 IST
Last Updated 13 ಮಾರ್ಚ್ 2024, 16:14 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಆಡಳಿತಾರೂಢ ಬಿಜೆಡಿ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿಯು ತನ್ನ ನಿರ್ಧಾರವನ್ನು ಶೀಘ್ರವೇ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ್‌ ಸಾಮಲ್‌, ಪಕ್ಷದ ಚುನಾವಣಾ ಉಸ್ತುವಾರಿ ವಿಜಯ್ ಪಾಲ್‌ ಸಿಂಗ್‌ ತೋಮರ್‌ ಮತ್ತು ಇತರ ನಾಯಕರು ಕಳೆದ ಮೂರು ದಿವಸಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ನಿವಾಸದಲ್ಲಿ ಮೈತ್ರಿ ಕುರಿತು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಡಿ ಜೊತೆ ಮೈತ್ರಿಮಾಡಿಕೊಳ್ಳುವ ಕುರಿತು ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ಒಪ್ಪಿಗೆಯಿಲ್ಲ. 2009ರ ಲೋಕಸಭೆ ಚುನಾವಣೆ ಮುನ್ನ ಬಿಜೆಡಿಯು ಬಿಜೆಪಿ ಸಖ್ಯ ತೊರೆದಿದ್ದ ಕುರಿತು ಅವರು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 5ರಂದು ಒಡಿಶಾಗೆ ಆಗಮಿಸಿದ್ದರು. ಆ ಬಳಿಕವೇ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ– ಬಿಜೆಡಿ ಮೈತ್ರಿ ಮಾಡಿಕೊಳ್ಳುವ ವಿಚಾರ ಮುನ್ನೆಲೆಗೆ ಬಂದಿತು.

ಸಂಭಾವ್ಯ ಮೈತ್ರಿ ಕುರಿತು ರಾಜ್ಯ ನಾಯಕರ ಜೊತೆ ಮಾತನಾಡುವ ಜವಾಬ್ದಾರಿಯನ್ನು ಬಿಜೆಪಿಯ ಉನ್ನತ ನಾಯಕತ್ವವು ಪ್ರಧಾನ್ ಅವರಿಗೆ ವಹಿಸಿದೆ ಎಂದು ಮೂಲಗಳು ಹೇಳಿವೆ.

ಮೈತ್ರಿ ಕುರಿತು ತನ್ನ ನಿಲುವನ್ನು ಬಿಜೆಡಿ ಇನ್ನೂ ಪ್ರಕಟಿಸಿಲ್ಲ. ‘ಮೈತ್ರಿ ಕುರಿತು ನಾವು ಸಂದಿಗ್ಧತೆ ಹೊಂದಿಲ್ಲ. ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ನಿರ್ಧಾರಕ್ಕೆ ಪಕ್ಷದ ಸದಸ್ಯರು ಬದ್ಧರಾಗಿರುತ್ತೇವೆ. ಮೈತ್ರಿಕೂಟವು ಹೊಸ ವಿಚಾರವಲ್ಲ. ಅದು ಈ ಹಿಂದೆಯೂ ನಡೆದಿತ್ತು. ಮುಂದೆಯೂ ನಡೆಯಬಹುದು’ ಎಂದು ಬಿಜೆಪಿ ಶಾಸಕ ಪರಶುರಾಮ್‌ ಧಾದ ಹೇಳಿದರು.

ಇದೇವೇಳೆ, ಮಾಧ್ಯಮಗಳು ಮೈತ್ರಿಕೂಟದ ಸಾಧ್ಯತೆ ಕುರಿತು ಊಹಾಪೋಹ ಹಬ್ಬಿಸುತ್ತಿವೆ ಎಂದು ಬಿಜೆಪಿ ನಾಯಕ ಸೂರ್ಯವಂಶಿ ಸೂರಜ್‌ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT