ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ; ರಾಹುಲ್‌ ಗಾಂಧಿ ಆರೋಪ

Published 18 ಏಪ್ರಿಲ್ 2024, 9:51 IST
Last Updated 18 ಏಪ್ರಿಲ್ 2024, 9:51 IST
ಅಕ್ಷರ ಗಾತ್ರ

ಕಣ್ಣೂರು: ಬಿಜೆಪಿಯು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸದಲ್ಲಿ ನಿರತವಾಗಿದ್ದು, ಕೋಟ್ಯಂತರ ಜನರ ನೆಮ್ಮದಿ ಹಾಳುಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಟೀಕಿಸಿದರು.

ಕಣ್ಣೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ಬಿಜೆಪಿಯು ವಿವಿಧತೆಯನ್ನು ನಾಶ ಮಾಡಲು ಹೊರಟಿದೆ. ಆದರೆ ಕಾಂಗ್ರೆಸ್‌ ಪಕ್ಷವು ಭಿನ್ನ ಸಂಸ್ಕೃತಿ, ಇತಿಹಾಸ, ಭಾಷೆ ಮತ್ತು ಸಂಪ್ರದಾಯಗಳನ್ನು ಒಪ್ಪಿಕೊಂಡಿದೆ’ ಎಂದರು. 

‘ಇ.ಡಿ, ಸಿಬಿಐನಂತಹ ಸಂಸ್ಥೆಗಳನ್ನು ತನ್ನ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿಯು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಬದಲಿಸಲು ಪ್ರಯತ್ನಿಸುತ್ತಿದೆ. ಒಂದು ರಾಷ್ಟ್ರ, ಒಂದು ಇತಿಹಾಸ ಮತ್ತು ಒಂದು ಭಾಷೆಯನ್ನು ಜನರ ಮೇಲೆ ಹೇರಲು ಮುಂದಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಪ್ರತಿದಿನವೂ ಹೋರಾಡುತ್ತೇನೆ. ಅವರೊಂದಿಗೆ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಬಿಜೆಪಿಯನ್ನು ಟೀಕಿಸಿದ್ದಕ್ಕೆ ಅವರ ನಿಯಂತ್ರಣದಲ್ಲಿರುವ ಕೆಲವು ಮಾಧ್ಯಮಗಳು ದಿನದ 24 ಗಂಟೆಯೂ ನನ್ನ ತೇಜೋವಧೆ ಕೆಲಸ ಮಾಡುತ್ತಿವೆ’ ಎಂದು ದೂರಿದರು.

‘ಬಿಜೆಪಿಯವರು ಹೋದಲ್ಲೆಲ್ಲಾ ಜನರ ನಡುವೆ ಒಡಕು ಮೂಡಿಸಿ ಪರಸ್ಪರ ಕಚ್ಚಾಡುವಂತೆ ಮಾಡುವವರಲ್ಲದೆ, ಸಮಸ್ಯೆ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಅಮೇಠಿಯಲ್ಲಿ ಸ್ಪರ್ಧಿಸುವ ಧೈರ್ಯ ಇಲ್ಲ: : ರಾಹುಲ್‌ ಗಾಂಧಿ ಅವರಿಗೆ ಅಮೇಠಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯ ಇಲ್ಲ ಎಂದು ಬಿಜೆಪಿ ನಾಯಕ ರಾಜನಾಥ್‌ ಸಿಂಗ್‌ ಹೇಳಿದರು. ಪತ್ತನಂತಿಟ್ಟದಲ್ಲಿ ಗುರುವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಅಮೇಠಿಯಲ್ಲಿ ಕಣಕ್ಕಿಳಿಯುವ ಧೈರ್ಯ ಇಲ್ಲದ ಕಾರಣ ಉತ್ತರ ಪ್ರದೇಶದಿಂದ ಕೇರಳಕ್ಕೆ ವಲಸೆ ಬಂದಿದ್ದಾರೆ. ಆದರೆ ಈ ಬಾರಿ ಅವರನ್ನು ಸಂಸದರಾಗಿ ಆಯ್ಕೆ ಮಾಡಬಾರದು ಎಂದು ವಯನಾಡಿನ ಮತದಾರರು ತೀರ್ಮಾನಿಸಿದ್ದಾರೆ ಎಂಬುದನ್ನು ಕೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT