ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷ ನಾಯಕರ ಬೆದರಿಸಲು ಇ.ಡಿ ದುರುಪಯೋಗ: ಶರದ್ ಪವಾರ್

Published 11 ಮಾರ್ಚ್ 2024, 14:08 IST
Last Updated 11 ಮಾರ್ಚ್ 2024, 14:08 IST
ಅಕ್ಷರ ಗಾತ್ರ

ಪುಣೆ: ಪ್ರತಿಪಕ್ಷಗಳ ನಾಯಕರಲ್ಲಿ ಭಯ ಸೃಷ್ಟಿಸಲು ಜಾರಿ ನಿರ್ದೇಶನಾಲಯದ (ಇ.ಡಿ) ರೀತಿಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ (ಶರದ್ ಪವಾರ್ ಬಣ) ಶರದ್ ಪವಾರ್ ಸೋಮವಾರ ಆರೋಪಿಸಿದ್ದಾರೆ. 

ಪುಣೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ‘ಬಿಜೆಪಿಯು ಇ.ಡಿ ಬೆಂಬಲಿಸುವ ಪಕ್ಷವಾಗಿದೆ. 2005ರಿಂದ 2023ರ ಮಧ್ಯೆ ಇ.ಡಿ ಒಟ್ಟಾರೆ 5,806 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಕೇವಲ 25 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ’ ಎಂದು ಹೇಳಿದರು. 

‘ಈ ಮೂಲಕ ಇತ್ಯರ್ಥವಾದ ಪ್ರಕರಣಗಳ ಪ್ರಮಾಣ ಶೇ 0.42ರಷ್ಟಿದ್ದರೆ, ದೋಷಿಗಳು ಎಂದು ನಿರೂಪಿತವಾದ ಪ್ರಕರಣಗಳ ಸಂಖ್ಯೆಯು ಕೇವಲ ಶೇ 0.40ರಷ್ಟಿದೆ. ಆದರೆ, 2022ರಲ್ಲಿ ₹300 ಕೋಟಿಯಷ್ಟಿದ್ದ ಇ.ಡಿಯ ಬಜೆಟ್ ಗಾತ್ರ ಮಾತ್ರ ₹404 ಕೋಟಿಗೆ ಜಿಗಿದಿದೆ’ ಎಂದು ದೂರಿದರು. 

2005–2023ರವರೆಗೆ ಯುಪಿಎ ಹಾಗೂ ಎನ್‌ಡಿಎ ಮೈತ್ರಿಕೂಟಗಳ ನೇತೃತ್ವದಲ್ಲಿ ಎರಡು ಸರ್ಕಾರಗಳು ಅಧಿಕಾರದಲ್ಲಿದ್ದವು. ಯುಪಿಎ ಅವಧಿಯಲ್ಲಿ ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಮೂವರು ಸೇರಿದಂತೆ 26 ಮಂದಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಇ.ಡಿ ತನಿಖೆ ನಡೆಸಿತ್ತು. ಯುಪಿಎ ಅವಧಿಯಲ್ಲಿ ಇ.ಡಿಯ ಕ್ರಮವು ರಾಜಕೀಯವಾಗಿ ಪ್ರೇರೇಪಿತವಾಗಿರಲಿಲ್ಲ. ಆದರೆ, 2014ರ ಬಳಿಕ ಇ.ಡಿಯು ಒಬ್ಬ ಬಿಜೆಪಿ ನಾಯಕನನ್ನು ವಿಚಾರಣೆಗೊಳಪಡಿಸಿಲ್ಲ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದಡಿ ಇ.ಡಿಯ ಕ್ರಮಗಳು ರಾಜಕೀಯವಾಗಿ ಪ್ರೇರೇಪಿತವಾಗಿವೆಯೇ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಶರದ್ ಪವಾರ್ ಹೇಳಿದರು. 

ಇ.ಡಿ ಏನು ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ಬಿಜೆಪಿ ಮುಖಂಡರಿಗೆ ಮುಂಚಿತವಾಗಿಯೇ ತಿಳಿದಿರುತ್ತದೆ. ಹೀಗಾಗಿ ಇ.ಡಿ ಏನು ಕ್ರಮ ಕೈಗೊಳ್ಳಬೇಕು ಎಂಬ ಆದೇಶಗಳು ಬಿಜೆಪಿ ಮುಖಂಡರಿಂದಲೇ ಬರುತ್ತಿವೆ ಎಂಬಂತೆ ಕಾಣುತ್ತಿದೆ ಎಂದಿದ್ದಾರೆ. 

ಶರದ್ ಪವಾರ್ ಅವರ ಸಂಬಂಧಿ ಹಾಗೂ ಎನ್‌ಸಿಪಿ ಶಾಸಕರೂ ಆಗಿರುವ ರೋಹಿತ್ ಪವಾರ್ ಅವರ ಮಾಲೀಕತ್ವದ ಸಕ್ಕರೆ ಕಾರ್ಖಾನೆಯ ಆಸ್ತಿಯನ್ನು ಇ.ಡಿ ವಶಕ್ಕೆ ಪಡೆದಿತ್ತು. ಅಲ್ಲದೆ, ಈ ಪ್ರಕರಣದಲ್ಲಿ ರೋಹಿತ್ ಪವಾರ್ ಅವರನ್ನೂ ಇ.ಡಿ ಎರಡು ಬಾರಿ ವಿಚಾರಣೆಗೊಳಪಡಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT