ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

EVM ವಿಶ್ವಾಸಾರ್ಹತೆ ಪ್ರಶ್ನಿಸಿದ ವಿಪಕ್ಷಗಳ ಲೇವಡಿ ಮಾಡಿದ ಬಿಜೆಪಿ ನಾಯಕರು

Published 5 ಡಿಸೆಂಬರ್ 2023, 11:29 IST
Last Updated 5 ಡಿಸೆಂಬರ್ 2023, 11:29 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕೆಲವು ಪ್ರತಿಪಕ್ಷ ನಾಯಕರು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ತಮ್ಮ ನ್ಯೂನತೆಗಳನ್ನು ಮರೆಮಾಚಲು ಅವರು ಸಕಾರಣಗಳನ್ನು ಹುಡುಕುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಭಾರತೀಯ ಜನತಾ ಪಕ್ಷ ( ಬಿಜೆಪಿ ) ವಿಜಯಶಾಲಿಯಾಗುತ್ತಿದ್ದಂತೆ, ಹಲವಾರು ವಿರೋಧ ಪಕ್ಷದ ನಾಯಕರು ಇವಿಎಂ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಪ್ರತಿಕ್ರಿಯಿಸಿದ್ದು, 'ಚುನಾವಣೆಯಲ್ಲಿ ಗೆಲ್ಲಲು ವಿಫಲವಾದಾಗಲೆಲ್ಲಾ ಅವರು ಇವಿಎಂಗಳನ್ನು ದೂಷಿಸುತ್ತಾರೆ. ಇದು ಹೊಸದೇನೂ ಅಲ್ಲ. ವಿರೋಧ ಪಕ್ಷಗಳು ಯಾರೇ ಆಗಲಿ, ಅವರು ಗೆದ್ದಾಗ ಇವಿಎಂಗಳು ಚೆನ್ನಾಗಿರುತ್ತವೆ. ಆದರೆ ಅವರು ಸೋತಾಗ ಇವಿಎಂಗಳನ್ನು ದೂಷಿಸುತ್ತಾರೆ' ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಕೆಟ್ಟ ಕೆಲಸಗಾರ ಸಾಧನಗಳನ್ನು ದೂಷಿಸುತ್ತಾನೆ':

‘ಇದೇ ಇವಿಎಂಗಳ ಸಹಾಯದಿಂದ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯಲ್ಲಿ ಮೂರು ಬಾರಿ ಮತ್ತು ಪಂಜಾಬ್‌ನಲ್ಲಿ ಒಮ್ಮೆ ಗೆದ್ದಿತು. 2012ರಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಸಂಪೂರ್ಣ ಬಹುಮತ ಪಡೆದಿತ್ತು. 2007ರಲ್ಲಿ ಬಹುಜನ ಸಮಾಜ ಪಕ್ಷ (BSP) ಉತ್ತರ ಪ್ರದೇಶದಲ್ಲಿ ಸಂಪೂರ್ಣ ಬಹುಮತ ಪಡೆದುಕೊಂಡಿತು. ಪ್ರಸ್ತುತ ಕಾಂಗ್ರೆಸ್ ತೆಲಂಗಾಣದಲ್ಲಿ ಬಹುಮತ ಪಡೆದಿದೆ. ಆದರೆ ಪರಿಸ್ಥಿತಿಯನ್ನು ವಿವರಿಸಲು ಅವರು ಮತಯಂತ್ರವನ್ನು ದೂಷಿಸುತ್ತಿದ್ದಾರೆ. ಕೆಟ್ಟ ಕೆಲಸಗಾರ ಸಾಧನಗಳನ್ನು ದೂಷಿಸುತ್ತಾನೆ' ಎಂದು ಬಿಜೆಪಿ ನಾಯಕ ಎಸ್‌ಪಿ ಸಿಂಗ್ ಬಾಘೇಲ್ ತಿರುಗೇಟು ನೀಡಿದ್ದಾರೆ.

'ಹಾಸ್ಯಾಸ್ಪದವಾಗಿದೆ':

ಬಿಜೆಪಿಯ ಹಿರಿಯ ನಾಯಕ ರಾಜೀವ್ ಪ್ರತಾಪ್ ರೂಡಿ ಮಾತನಾಡಿ, ‘ಕಳೆದ 18-19 ವರ್ಷಗಳಿಂದ ಇವಿಎಂಗಳಿವೆ. ವಿರೋಧ ಪಕ್ಷದವರು ಚುನಾವಣೆಯಲ್ಲಿ ಗೆದ್ದಾಗ ಈ ಪ್ರಶ್ನೆಗಳನ್ನು ಎತ್ತುವುದಿಲ್ಲ. ಅವರು ಜನರನ್ನು ನಂಬುವುದಿಲ್ಲವೇ? ಪದೇ ಪದೇ ಸೋತ ನಂತರವೂ ಪ್ರತಿಪಕ್ಷಗಳು ಈ ಬಗ್ಗೆ ಪ್ರಶ್ನೆ ಎತ್ತುತ್ತಿರುವುದು ಹಾಸ್ಯಾಸ್ಪದವಾಗಿದೆ' ಎಂದಿದ್ದಾರೆ.

'ಇವಿಎಂಗಳನ್ನು ದೂರುತ್ತಾರೆ ಎಂಬುದು ಗೊತ್ತಿತ್ತು. ಅವರ(ವಿಪಕ್ಷ ನಾಯಕರು) ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ. ಅವರ ಭ್ರಷ್ಟಾಚಾರ ಮತ್ತು ತುಷ್ಟೀಕರಣವನ್ನು ಜನರು ತಿರಸ್ಕರಿಸಿದ್ದಾರೆ. ಆದ್ದರಿಂದ ಅವರು ಇಂತಹ ಅಪಕ್ವವಾದ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.

ದೇಶದ ಜನರು ಪ್ರತಿಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಭವಿಷ್ಯದಲ್ಲಿ ಬಿಜೆಪಿ ಪ್ರತಿ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಕಿಶನ್ ವಿಶ್ವಾಸ ವ್ಯಕ್ತಪಡಿಸಿದರು.

ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸಿದ್ದ ದಿಗ್ವಿಜಯ ಸಿಂಗ್:

ಮೂರು ರಾಜ್ಯಗಳ(ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ) ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ಬೆನ್ನಲ್ಲೇ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪ್ರಶ್ನೆ ಮಾಡಿದ್ದರು.

‘ಚಿಪ್ ಹೊಂದಿರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು. 2003ರಿಂದಲೇ ಇವಿಎಂ ಮೂಲಕ ಮತದಾನವನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ' ಎಂದು ದಿಗ್ವಿಜಯ ಸಿಂಗ್ ಹೇಳಿದ್ದರು.

'ಭಾರತೀಯ ಪ್ರಜಾಪ್ರಭುತ್ವವನ್ನು ವೃತ್ತಿಪರ ಹ್ಯಾಕರ್‌ಗಳಿಂದ ನಿಯಂತ್ರಿಸಲು ಅನುಮತಿಸಬಹುದೇ! ಇದು ಎಲ್ಲ ರಾಜಕೀಯ ಪಕ್ಷಗಳು ಗಮನಹರಿಸಬೇಕಾದ ಮೂಲಭೂತ ಪ್ರಶ್ನೆಯಾಗಿದೆ. ಚುನಾವಣಾ ಆಯೋಗ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ದಯವಿಟ್ಟು ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವೀರಾ' ಎಂದು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT