ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಣಾಳಿಕೆ: ರಾಜತಾಂತ್ರಿಕ ಕಾರ್ಯಸೂಚಿಯೊಳಗೆ ಹಿಂದುತ್ವದ ಬೆಸುಗೆ

ವಿಶ್ವದಾದ್ಯಂತ ‘ರಾಮಾಯಣ ಹಬ್ಬ’: ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ
Published 15 ಏಪ್ರಿಲ್ 2024, 16:22 IST
Last Updated 15 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ರಾಜತಾಂತ್ರಿಕತೆಯಲ್ಲಿ ಹಿಂದುತ್ವದ ತಾತ್ವಿಕತೆಯ ತಿರುಳನ್ನು ಸೇರಿಸುವ ಆಶಯವನ್ನು ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಪಡಿಸಿದೆ.  

ಮಹಾತ್ಮ ಗಾಂಧಿ, ಬುದ್ಧನಂತಹ ಸಾಂಪ್ರದಾಯಿಕ ಮಾದರಿಗಳನ್ನು ಬಿಟ್ಟು ರಾಮನನ್ನು ಭಾರತೀಯ ರಾಜತಾಂತ್ರಿಕತೆಯ ಕೇಂದ್ರ ಪ್ರತಿಮೆಯಾಗಿ ಮಾಡುವ ಮೂಲಕ ಹೊಸ ರಾಜತಾಂತ್ರಿಕ ಪರಿಭಾಷೆ ರೂಪಿಸಲು ಬಿಜೆಪಿಯು ಮುಂದಾಗಿದೆ.  

ರಾಮಾಯಣ ಮಹಾಕಾವ್ಯದಲ್ಲಿ ಅಡಕವಾಗಿರುವ ಬೋಧನೆಗಳನ್ನು ದಾಖಲೀಕರಿಸುವುದಕ್ಕೆ ಮತ್ತು ಪ್ರಚಾರ ಮಾಡುವುದಕ್ಕೆ ಬದ್ಧವಾದ ಸಮಗ್ರ ಜಾಗತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಬಿಜೆಪಿಯ ಚಿಂತನೆಯಾಗಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ರಾಮಾಯಣ ಉತ್ಸವ ಅಥವಾ ಹಬ್ಬಗಳನ್ನು ಆಯೋಜಿಸುವ ಮೂಲಕ ಈ ಯೋಜನೆಯನ್ನು ದೇಶಗಳ ಗಡಿಗಳನ್ನು ದಾಟಿಸುವ ಆಶಯವನ್ನು ಬಿಜೆಪಿ ವ್ಯಕ್ತಪಡಿಸಿದೆ.                      

‘ಭಾರತೀಯ ನಾಗರಿಕತೆಯ ಪ್ರಮುಖ ತಾಣಗಳನ್ನು ಪುನಃಶ್ಚೇತನಗೊಳಿಸುವ ದಿಸೆಯಲ್ಲಿ ನಾವು ಜಗತ್ತಿನ ಹಲವು ರಾಷ್ಟ್ರಗಳೊಂದಿಗೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ. ರಾಮಾಯಣವು ಜಗತ್ತಿನಾದ್ಯಂತ, ಮುಖ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ, ಪ್ರಸಿದ್ಧವಾಗಿದೆ. ರಾಮನ ಮೂರ್ತ ಮತ್ತು ಅಮೂರ್ತ ಪರಂಪರೆಯನ್ನು ದಾಖಲಿಸಲು ಮತ್ತು ಪ್ರಚುರಪಡಿಸಲು ನಾವು ಎಲ್ಲ ರಾಷ್ಟ್ರಗಳಲ್ಲಿಯೂ ಜಾಗತಿಕ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ’ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. 

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸ್ಮರಣಾರ್ಥ ಜಗತ್ತಿನಾದ್ಯಂತ ರಾಮಾಯಣ ಉತ್ಸವವನ್ನು ಹೆಚ್ಚು ಉತ್ಸಾಹದಿಂದ ಆಚರಿಸುವ ಭರವಸೆಯನ್ನೂ ಪ್ರಣಾಳಿಕೆ ಒಳಗೊಂಡಿದೆ.

ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳನ್ನು ರಕ್ಷಿಸಲು ಮತ್ತು ಪ್ರಚಾರ ಮಾಡಲು ತ್ರೈವಾರ್ಷಿಕ ಅಂತರರಾಷ್ಟ್ರೀಯ ಸಮಾವೇಶಗಳನ್ನು ಏರ್ಪಡಿಸುವುದರ ಜತೆಗೆ ಪ್ರಾಚೀನ ಸಾಹಿತ್ಯ ಕೃತಿಗಳನ್ನು ವಿದೇಶಿ ಭಾಷೆಗಳಿಗೆ ತರ್ಜುಮೆ ಮಾಡಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ.

‘ಯುಗೇ ಯುಗೀನ್ ಭಾರತ ರಾಷ್ಟ್ರೀಯ ಮ್ಯೂಸಿಯಂ’ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಲಾಗುವುದು ಮತ್ತು ಅದನ್ನು ಜಗತ್ತಿನ ಅತ್ಯಂತ ಜನಪ್ರಿಯ ಮ್ಯೂಸಿಯಂ ಆಗಿ ರೂಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. 

ಯೋಗ ಆಯುರ್ವೇದ ವಿದೇಶಕ್ಕೆ
ಭಾರತದ ಯೋಗ ಮತ್ತು ಆಯುರ್ವೇದವನ್ನು ವಿದೇಶಗಳಿಗೆ ಕೊಂಡೊಯ್ಯುವುದಾಗಿ ಬಿಜೆಪಿ ಭರವಸೆ ನೀಡಿದೆ. ‘ಪ್ರಮುಖ ರಾಷ್ಟ್ರಗಳಲ್ಲಿ ಯೋಗ ಮತ್ತು ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಿ ವಿವಿಧ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಯೋಗ ಮತ್ತು ಆಯುರ್ವೇದಕ್ಕಾಗಿ ಜಾಗತಿಕವಾಗಿ ಮಾನ್ಯತೆ ಪಡೆದ ಪ್ರಮಾಣೀಕರಣ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಜಗತ್ತಿನ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಭಾರತದ ಶಾಸ್ತ್ರೀಯ ಭಾಷೆಗಳ ಕಲಿಕೆಯನ್ನು ಉತ್ತೇಜಿಸಲಾಗುವುದು. ಭಾರತದಿಂದ ಅಕ್ರಮವಾಗಿ ಹೊತ್ತೊಯ್ಯಲಾಗಿರುವ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ವಾಪಸ್ ತರಲಾಗುವುದು’ ಎಂದು ಕೂಡ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT