ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪೂರ್ವ ಮೈತ್ರಿ ಇಲ್ಲ: ಬಿಜೆಪಿ

Published : 18 ಆಗಸ್ಟ್ 2024, 9:01 IST
Last Updated : 18 ಆಗಸ್ಟ್ 2024, 9:01 IST
ಫಾಲೋ ಮಾಡಿ
Comments

ಜಮ್ಮು: ವಿಧಾನಸಭೆ ಚುನಾವಣೆಗೂ ಮುನ್ನ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ರೈನಾ ಭಾನುವಾರ ಹೇಳಿದ್ದಾರೆ.

ಚುನಾವಣೆಗೆ ತಮ್ಮ ಪಕ್ಷ ಸಂಪೂರ್ಣ ಸಜ್ಜಾಗಿದೆ ಎಂದಿರುವ ರೈನಾ, ಮೊದಲ ಹಂತದ ಚುನಾವಣೆಗೆ ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ' ಎಂದಿದ್ದಾರೆ. ಹಾಗೆಯೇ, 'ಕಾಶ್ಮೀರ ಕಣಿವೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲು ಸಜ್ಜಾಗಿರುವ 8 ರಿಂದ 10 ಸಂಭಾವ್ಯ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಮಾತುಕತೆ ಸಫಲವಾದರೆ, ಜಂಟಿಯಾಗಿ ಕಣಕ್ಕಿಳಿಯುವ ಬಗ್ಗೆ ಕಾರ್ಯತಂತ್ರ ರೂಪಿಸುತ್ತೇವೆ' ಎಂದೂ ತಿಳಿಸಿದ್ದಾರೆ.

'ಹೆಚ್ಚಿನ ಕ್ಷೇತ್ರಗಳಲ್ಲಿ ನಾವು ಕಣಕ್ಕಿಳಿಯುತ್ತೇವೆ. ಕೆಲವು ಕಡೆ ಪಕ್ಷೇತರರೊಂದಿಗೆ ಕಣಕ್ಕಿಳಿಯುವ ತಂತ್ರವನ್ನೂ ರೂಪಿಸುತ್ತಿದ್ದೇವೆ. ಬಿಜೆಪಿಯು ಭಾರಿ ಬಹುಮತ ಸಾಧಿಸಲಿದ್ದು, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಚೌಧರಿ ಝುಲ್ಫಿಕರ್‌ ಅಲಿ ಅವರು ಬಿಜೆಪಿ ಸೇರಿರುವ ಬಗ್ಗೆ ಮಾತನಾಡಿದ ರೈನಾ, ಚೌಧರಿ ಅವರ ಸೇರ್ಪಡೆಯು ನಮ್ಮ ಪಕ್ಷಕ್ಕೆ ಸಾಕಷ್ಟು ಬಲ ತಂದಿದೆ. ರಾಜೌರಿ–ಪೂಂಚ್‌ ವಲಯದಲ್ಲಿ ಅವರು ಪ್ರಭಾವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿನ 90 ಕ್ಷೇತ್ರಗಳಿಗೆ ಸೆಪ್ಟೆಂಬರ್‌ 18, 25 ಹಾಗೂ ಅಕ್ಟೋಬರ್‌ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT