ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾತುಕಡಿ ಹೊಂದಲು ಬಿಎಸ್‌ಎಫ್‌ ಚಿಂತನೆ

Published 17 ಡಿಸೆಂಬರ್ 2023, 15:14 IST
Last Updated 17 ಡಿಸೆಂಬರ್ 2023, 15:14 IST
ಅಕ್ಷರ ಗಾತ್ರ

ಕೋಲ್ಕತ್ತ : ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ಮತ್ತು ಒಳನುಸುಳುವಿಕೆ ತಡೆಯಲು ಸುಮಾರು 1,100 ಯೋಧರ ನೌಕಾತುಕಡಿ ಹೊಂದಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ತೀರ್ಮಾನಿಸಿದೆ.

ಇದರ ಜೊತೆಗೆ 40 ಆಧುನಿಕ ಡ್ರೋನ್‌ಗಳು ಹಾಗೂ 12–14 ಸರ್ವಋತು ವಾಹನಗಳು (ಎಟಿವಿ) ಬಿಎಸ್‌ಎಫ್‌ನ ಸಾಮರ್ಥ್ಯ ವೃದ್ಧಿ ಭಾಗವಾಗಿ ಸೇರ್ಪಡೆ ಆಗಲಿವೆ. ಗಡಿಗೆ ಹೊಂದಿಕೊಂಡಂತೆ ಇರುವ ಸುಂದರಬನ ವಲಯದಲ್ಲಿ ಗಸ್ತು ಬಲಪಡಿಸುವುದು ಇದರ ಗುರಿಯಾಗಿದೆ.

ಉದ್ದೇಶಿತ ಹೊಸ ನೌಕಾ ತುಕಡಿಯಲ್ಲಿ ಸುಮಾರು 1,100 ಮಂದಿ ತರಬೇತಿ ಪಡೆದ ಯೋಧರು ಇರುತ್ತಾರೆ. ಪ್ರಸ್ತಾವಕ್ಕೆ ಅನುಮೋದನೆ ದೊರೆತ ಹಿಂದೆಯೇ ತುಕಡಿ ರಚಿಸುವ ಕಾರ್ಯವೂ ಆರಂಭವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಸ್ತುತ ಬಿಎಸ್‌ಎಫ್‌ ಈ ವಲಯದಲ್ಲಿ ಗಸ್ತು ಕಾರ್ಯಕ್ಕಾಗಿ ಸುಮಾರು 50 ಸಣ್ಣ ಮತ್ತು ದೊಡ್ಡದಾದ ಸ್ಪೀಡ್ ಬೋಟ್‌ಗಳು, ತೇಲುವ ಬಿಎಸ್‌ಎಫ್‌ ಉಪಠಾಣೆಗಳನ್ನು ಅವಲಂಬಿಸಿದೆ. 

ಭಾರತ ಮತ್ತು ಬಾಂಗ್ಲಾ ಗಡಿ ಸುಮಾರು 4,096 ಕಿ.ಮೀ ವ್ಯಾಪ್ತಿಯ ಕಾವಲು ಹೊಣೆ ಬಿಎಸ್‌ಎಫ್‌ನದ್ದಾಗಿದೆ. ಈ ಪೈಕಿ 2,216.7 ಕಿ.ಮೀ ಭಾಗವು ಪಶ್ಚಿಮ ಬಂಗಾಳದಲ್ಲಿದ್ದು, ಈ ಪೈಕಿ 300 ಕಿ.ಮೀ ವ್ಯಾಪ್ತಿ ಸುಂದರಬನದ ವ್ಯಾಪ್ತಿಗೆ ಬರಲಿದೆ.

ಕೋಲ್ಕತ್ತದಲ್ಲಿ ನೆಲೆ ಹೊಂದಿರುವ ಬಿಎಸ್‌ಎಫ್‌ನ ಈಶಾನ್ಯ ಕಮಾಂಡ್‌ ಈ ಕುರಿತು ನೀಲನಕ್ಷೆ ರೂಪಿಸಿದ್ದು, ಹಣಕಾಸು ಬಿಡುಗಡೆಗೆ ಕುರಿತಂತೆ ಗೃಹ ಸಚಿವಾಲಯದ ಅಂತಿಮ ಅನುಮೋದನೆಯ ನಿರೀಕ್ಷೆಯಲ್ಲಿದೆ ಎಂದು ಬಿಎಸ್‌ಎಫ್‌ ಮೂಲಗಳು ತಿಳಿಸಿವೆ.

ಸುಂದರಬನ ಜಗತ್ತಿನ ಮ್ಯಾಂಗ್ರೋವ್‌ ತಳಿಯ (ಉಷ್ಣವಲಯದ ಪೊದೆ) ಮರಗಳಿರುವ ಬೃಹತ್ ಅರಣ್ಯ ವಲಯ. ಅಂದಾಜು 100 ದ್ವೀಪಗಳು, ಸಣ್ಣ ಝರಿಗಳು, ನದಿ, ಕಾಲುವೆಗಳು, ನೀರಿನ ಒತ್ತಡದಿಂದ ಮೂಡಿರುವ ಹಲವು ತೀರ ಪ್ರದೇಶಗಳಿವೆ. ಇದರ ಒಟ್ಟು ವಿಸ್ತೀರ್ಣ ಅಂದಾಜು 9,630 ಚದರ ಕಿ.ಮೀಗಳಾಗಿವೆ. ಗಂಗಾ, ಬ್ರಹ್ಮಪುತ್ರಾ, ಮೇಘ್ನಾ ನದಿ ಪಾತ್ರಕ್ಕೆ ಈ ವಲಯ ಹೊಂದಿಕೊಂಡಿದೆ.

ಭಾರತ– ಬಾಂಗ್ಲಾ ಅಂತರರಾಷ್ಟ್ರೀಯ ಗಡಿಯಲ್ಲಿ ಸುಂದರಬನ ನಿರ್ಣಾಯಕವಾದ ವಲಯವಾಗಿದೆ. ಉಗ್ರರು, ಕ್ರಿಮಿನಲ್‌ಗಳು ಒಳನುಸುಳಲು ಈ ಮಾರ್ಗ ಅನುಸರಿಸಬಹುದು ಎಂಬ ಕಾರಣದಿಂದ ಈ ವಲಯದ ಸುರಕ್ಷತೆ ಹೆಚ್ಚು ಅಗತ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT