ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ದಿನಗಳಲ್ಲಿ ಸಿಬಿಐ ನನ್ನನ್ನು ಬಂಧಿಸದಿದ್ದರೆ ಪ್ರಧಾನಿ ಕ್ಷಮೆಯಾಚಿಸಲಿ: ಸಿಸೋಡಿಯಾ

Last Updated 15 ಸೆಪ್ಟೆಂಬರ್ 2022, 13:59 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯನ್ನು ಒಳಗೊಂಡಿರುವ ರಹಸ್ಯ ಕಾರ್ಯಾಚರಣೆಯ ವಿಡಿಯೊವನ್ನು ಸಿಬಿಐ ಜೊತೆ ಹಂಚಿಕೊಳ್ಳುವಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಬಿಜೆಪಿಯನ್ನು ಒತ್ತಾಯಿಸಿದ್ದಾರೆ.

ನಾಲ್ಕು ದಿನಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ನನ್ನನ್ನು ಬಂಧಿಸದಿದ್ದರೆ, ಬಿಜೆಪಿ ಬಿಡುಗಡೆ ಮಾಡಲಾಗಿರುವ ವಿಡಿಯೊ ಮತ್ತೊಂದು ಸುಳ್ಳು ಮತ್ತು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ಪ್ರಧಾನಿ ಕಚೇರಿಯಲ್ಲಿ ನಡೆಸಿದ ಪಿತೂರಿಯ ಭಾಗ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

‘ತಥಾಕಥಿತ ಸ್ಟಿಂಗ್’ನಲ್ಲಿ ಮಾಡಲಾದ ಆರೋಪಗಳ ಆಧಾರದ ಮೇಲೆ ಸಿಬಿಐ ಸೋಮವಾರದವರೆಗೆ ನನ್ನನ್ನು ಬಂಧಿಸುವಲ್ಲಿ ವಿಫಲವಾದರೆ, ತಮ್ಮ ಕಚೇರಿಯಲ್ಲಿ ಅಂತಹ ಪಿತೂರಿಗಳನ್ನು ರೂಪಿಸುವಲ್ಲಿ ತೊಡಗಿರುವುದು ತಪ್ಪು ಎಂದು ಒಪ್ಪಿಕೊಂಡು ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ಒತ್ತಾಯಿಸಿದರು.

‘ನನ್ನ ನಿವಾಸ ಮತ್ತು ಬ್ಯಾಂಕ್ ಲಾಕರ್‌ನಿಂದ ಸಿಬಿಐ ಅಧಿಕಾರಿಗಳಿಗೆ ಏನೂ ಸಿಗದ ಕಾರಣ, ಅವರು ಹೊಸ ವಿಡಿಯೊ ತಂದಿದ್ದಾರೆ’ ಎಂದು ಸಿಸೋಡಿಯಾ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಈಗ ಈ ವಿಡಿಯೊವನ್ನು ಸಿಬಿಐಗೆ ಹಸ್ತಾಂತರಿಸುವಂತೆ ನಾನು ಬಿಜೆಪಿಯನ್ನು ವಿನಂತಿಸಲು ಬಯಸುತ್ತೇನೆ. ಬಿಜೆಪಿಯ ವಿಸ್ತೃತ ಶಾಖೆಯಾಗಿರುವ ಸಿಬಿಐ ತ್ವರಿತ ತನಿಖೆ ನಡೆಸಬೇಕು ಮತ್ತು ವಿಡಿಯೊದಲ್ಲಿ ಏನಾದರೂ ಸತ್ಯವಿದ್ದರೆ ಸೋಮವಾರದವರೆಗೆ ನಾಲ್ಕು ದಿನಗಳಲ್ಲಿ ನನ್ನನ್ನು ಬಂಧಿಸಬೇಕು’ ಎಂದು ಅವರು ಹೇಳಿದರು.

ಸಿಬಿಐ ಮತ್ತು ಇಡಿಯಿಂದ ನಕಲಿ ಪ್ರಕರಣಗಳ ದಾಖಲು, ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ಮತ್ತು ಶೋಧದಂತಹ ಷಡ್ಯಂತ್ರಗಳ ಮೂಲಕ ರಾಜ್ಯಗಳಲ್ಲಿನ ಇತರ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಮತ್ತು ಪ್ರಧಾನಿ ಕಚೇರಿಗಳಲ್ಲಿ ‘ಹಗಲು ರಾತ್ರಿ’ ಸಂಚು ರೂಪಿಸಲಾಗುತ್ತಿದೆ ಹೆಣೆಯಲಾಗಿದೆ ಎಂದು ಅವರು ಆರೋಪಿಸಿದರು. .

ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಸಂಬಂಧಿಸಿದ ರಹಸ್ಯ ಕಾರ್ಯಾಚರಣೆಯ ಮತ್ತೊಂದು ವಿಡಿಯೊವನ್ನು ಗುರುವಾರ ಬಿಡುಗಡೆಗೊಳಿಸಿತು. ಪ್ರಕರಣದ ಒಂಬತ್ತನೇ ಆರೋಪಿ ಅಮಿತ್ ಅರೋರಾ, ಆಮ್ ಆದ್ಮಿ ಪಕ್ಷದ ಹಗರಣವನ್ನು ಬಯಲು ಮಾಡಿದ್ದಾರೆ ಎಂದು ಬಿಜೆ‍ಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದರು.

ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರವು ಆಯ್ದ ಕೆಲವರಿಗೆ ಸಹಾಯ ಮಾಡಲು ತನ್ನ ಅಬಕಾರಿ ನೀತಿಯನ್ನು ರೂಪಿಸಿದೆ ಮತ್ತು ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳಲ್ಲಿ ತನ್ನ ಪ್ರಚಾರಕ್ಕಾಗಿ ಬಳಸಿದೆ ಎಂದು ರಹಸ್ಯ ಕಾರ್ಯಾಚರಣೆ ವಿಡಿಯೊ ಬಿಡುಗಡೆ ಬಳಿಕ ಬಿಜೆಪಿ ಆರೋಪ ಮಾಡಿತ್ತು.

ಕೇಜ್ರಿವಾಲ್ ಸರ್ಕಾರವು ಉದ್ದೇಶಪೂರ್ವಕವಾಗಿ ಅಬಕಾರಿ ನೀತಿಯಿಂದ ಸಣ್ಣ ಉದ್ಯಮಿಗಳನ್ನು ಹೊರಗಿಟ್ಟಿತ್ತು ಎಂದು ಮದ್ಯದ ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಕೆಲವು ವ್ಯಕ್ತಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದಲು ಅದು ಸಹಾಯ ಮಾಡುತ್ತಿತ್ತು ಎಂದು ಅವರು ಹೇಳಿದ್ದರು.

ಇದೇವೇಳೆ, ಕೇಜ್ರಿವಾಲ್ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT