ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ರಾಜ್ಯಪಾಲ, ಸಿಎಂ ಜಟಾಪಟಿ ತೀವ್ರ

ಕಣ್ಣೂರಿನಲ್ಲಿ ನಡೆದ ಹತ್ಯೆಗಳಲ್ಲಿ ವಿಜಯನ್ ಪಾತ್ರ–ಖಾನ್‌ ಆರೋಪ * ರಾಜ್ಯಪಾಲರ ಮಾತಿನಲ್ಲಿ ಹಿಡಿತವಿಲ್ಲ–ಪಿಣರಾಯಿ
Published 18 ಡಿಸೆಂಬರ್ 2023, 16:30 IST
Last Updated 18 ಡಿಸೆಂಬರ್ 2023, 16:30 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ನಡುವಿನ ಜಟಾಪಟಿ ಮುಂದುವರಿದಿದೆ.

ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ತಮ್ಮ ಟೀಕಾಪ್ರಹಾರ ಮುಂದುವರಿಸಿದ್ದಾರೆ. ಮತ್ತೊಂದೆಡೆ, ರಾಜ್ಯಪಾಲರ ವಿರುದ್ಧ ಕೇಂದ್ರಕ್ಕೆ ದೂರು ನೀಡಲು ಚಿಂತನೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ವಿಜಯನ್‌ ಹೇಳಿದ್ದಾರೆ.

ಮುಖ್ಯಮಂತ್ರಿ ವಿಜಯನ್‌ ಅವರ ದೂರು, ಆಕ್ಷೇಪಗಳಿಗೆ ಸೊಪ್ಪು ಹಾಕದ ರಾಜ್ಯಪಾಲ ಖಾನ್‌ ಅವರು, ಕೋಯಿಕ್ಕೋಡ್‌ ನಗರದಲ್ಲಿ ಸೋಮವಾರ ಸಂಚಾರ ಕೈಗೊಂಡಿದ್ದರು. ಇದರಿಂದ, ಎಸ್‌ಎಫ್‌ಐ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿಗಳ ಸಂಘಟನೆಗಳೊಂದಿಗೆ ರಾಜ್ಯಪಾಲರು ನೇರ ಸಂಘರ್ಷಕ್ಕೆ ಇಳಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಮ್ಮ ವಿರುದ್ಧ ಪ್ರತಿಭಟನೆ ನಡೆಸುವಂತೆ ವಿಜಯನ್‌ ಅವರು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂಬ ತಮ್ಮ ಆರೋಪವನ್ನು ರಾಜ್ಯಪಾಲ ಖಾನ್‌ ಪುನರುಚ್ಚರಿಸಿದ್ದಾರೆ.

ಸಿಪಿಎಂ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ ಕಾರ್ಯಕರ್ತರು ವಿದ್ಯಾರ್ಥಿಗಳಲ್ಲ, ಪುಂಡರು ಎಂದು ಟೀಕಿಸಿರುವಖಾನ್‌ ಅವರು, ‘ಅವರ ಬೆದರಿಕೆಗಳಿಗೆ ನಾನು ಮಣಿಯುವುದಿಲ್ಲ’ ಎಂದು ಹೇಳಿದ್ದಾರೆ.

‘ಕಣ್ಣೂರಿನಲ್ಲಿ ರಾಜಕೀಯ ದ್ವೇಷದಿಂದ ನಡೆದಿರುವ ಹಲವು ಕೊಲೆಗಳಲ್ಲಿ ವಿಜಯನ್‌ ಶಾಮೀಲಾಗಿದ್ದಾರೆ’ ಎಂಬ ಗಂಭೀರ ಆರೋಪ ಮಾಡಿರುವ ರಾಜ್ಯಪಾಲರು, ‘ನಿಮಗೆ ಪಿಣರಾಯಿ ಹಿನ್ನೆಲೆ ಗೊತ್ತಿದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಎಲ್ಲ ವಿದ್ಯಾರ್ಥಿಗಳು ಎಸ್‌ಎಫ್‌ಐ ಜೊತೆಗೆ ಗುರುತಿಸಿಕೊಂಡಿದ್ದಾರಾ? ಏಕೆ ಬೇರೆ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿಲ್ಲ? ಏಕೆಂದರೆ, ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ತಾವು ವಿ.ವಿ ಮೇಲೆ ನಿಯಂತ್ರಣ ಹೊಂದಲಾಗದು ಎಂಬುದು ಅವರಿಗೆ ಅರ್ಥವಾಗಿದೆ’ ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷವು ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂಬುದಕ್ಕೆ ಉದಾಹರಣೆಯಾಗಿ ಅವರು, ‘ಕ್ಯಾಲಿಕಟ್‌ ವಿಶ್ವವಿದ್ಯಾಲಯದಲ್ಲಿ ಆರು ಮಂದಿ ಮರಗೆಲಸದವರನ್ನು ನೇಮಿಸಲಾಗಿದೆ. ಅಲ್ಲಿ ಇದ್ದದ್ದು ಒಂದು ಹುದ್ದೆ ಮಾತ್ರ’ ಎಂದರು.

‘ಸಿಪಿಎಂನವರನ್ನು ಸೆನೆಟ್‌ಗೆ ನಾಮಕರಣ ಮಾಡಿದರೆ ಸರಿಯಾಗುತ್ತದಾ’ ಎಂದೂ ಪ್ರಶ್ನಿಸಿದ್ದಾರೆ.

ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌

ರಾಜ್ಯಪಾಲರ ವಿರುದ್ಧ ಪಿಣರಾಯಿ ವಾಗ್ದಾಳಿ

ಕೊಲ್ಲಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡ ರಾಜ್ಯಪಾಲರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಇಲ್ಲಿ ನಡೆದ ನವ ಕೇರಳ ವೇದಿಕೆ ಕಾರ್ಯಕ್ರಮದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ರಾಜ್ಯಪಾಲ ಖಾನ್‌ ಅವರಿಗೆ ತಮ್ಮ ಮಾತಿನ ಮೇಲೆ ಹಿಡಿತ ಇಲ್ಲ. ಕೇಂದ್ರ ಮತ್ತು ರಾಜ್ಯದ ನಡುವಿನ ಸೌಹಾರ್ದ ಸಂಬಂಧ ಉಳಿಯಬೇಕಾದರೆ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು’ ಎಂದರು. ‘ರಾಜ್ಯಪಾಲ ಆರೀಫ್ ಮೊಹಮದ್ ಖಾನ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸುವುದನ್ನು ತಮ್ಮ ನೇತೃತ್ವದ ಸರ್ಕಾರ ಪರಿಗಣಿಸಬಹುದು’ ಎಂದೂ ಹೇಳಿದ್ದಾರೆ. ‘ವಿಶ್ವವಿದ್ಯಾಲಯ ಕಳಿಸಿಕೊಡುವ ಪಟ್ಟಿಗೆ ಅನುಮೋದನೆ ನೀಡುವ ಮೂಲಕ ರಾಜ್ಯಪಾಲರು ಸೆನೆಟ್‌ ಸದಸ್ಯರನ್ನು ನಾಮನಿರ್ದೇಶನಗೊಳಿಸುವುದು ಸಹಜ ಪ್ರಕ್ರಿಯೆ. ಆದರೆ ಸಂಘ ಪರಿವಾರದ ಕಾರ್ಯಕರ್ತರನ್ನು ರಾಜ್ಯಪಾಲರು ನಾಮನಿರ್ದೇಶನಗೊಳಿಸಿದ್ದಾರೆ’ ಎಂದು ದೂರಿದ ವಿಜಯನ್‌ ‘ಈ ಪಟ್ಟಿಯನ್ನು ಎಲ್ಲಿಂದ ಪಡೆದರು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು. ತಮ್ಮ ವಿರುದ್ಧ ಕಪ್ಪ ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಪೊಲೀಸರು ಹಾಗೂ ಡಿವೈಎಫ್‌ಐ ಸದಸ್ಯರು ಕ್ರೂರವಾಗಿ ವರ್ತಿಸಿದ್ದನ್ನು ಕೂಡ ಮುಖ್ಯಮಂತ್ರಿ ವಿಜಯನ್‌ ಸಮರ್ಥಿಸಿಕೊಂಡಿದ್ದಾರೆ. ಇದು ಕೂಡ ಇಬ್ಬರ ನಡುವಿನ ಜಟಾಪಟಿ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT