ಬಿಲಾಸ್‌ಪುರ: ವಿವಾಹೇತರ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರು ಅಪ್ರಾಪ್ತ ಮಕ್ಕಳನ್ನು ಹತ್ಯೆ ಮಾಡಿದ್ದ 34 ವರ್ಷದ ವ್ಯಕ್ತಿಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿರುವ ಘಟನೆ ಛತ್ತೀಸಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.
‘ಇದೊಂದು ಅತ್ಯಂತ ಕ್ರೂರ ಕೃತ್ಯವಾಗಿದೆ. ನಾಲ್ವರ ಕೊಲೆ ಪ್ರಕರಣದ ಆರೋಪಿ ಉಮೆಂದ್ ಕೇವತ್ ತಪ್ಪಿತಸ್ಥ ಎಂದು ಸಾಬೀತಾಗಿದೆ’ ಎಂದು ಹತ್ತನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಅವಿನಾಶ್ ಕೆ ತ್ರಿಪಾಠಿ ತೀರ್ಪು ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ನ್ಯಾಯಾಲಯವು ಕೇವತ್‌ಗೆ ₹10,000 ದಂಡವನ್ನೂ ವಿಧಿಸಿದೆ. ಪ್ರಕರಣದ ವಿಚಾರಣೆ ಮುಗಿದ ನಂತರ ಜುಲೈ 29ರಂದು ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿತ್ತು.
2024ರ ಜನವರಿ 1ರಂದು ಬಿಲಾಸ್‌ಪುರ ಜಿಲ್ಲೆಯ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ರಿ ಗ್ರಾಮದ ಮನೆಯಲ್ಲಿ ಪತ್ನಿ ಸುಕೃತಾ (32), ಇಬ್ಬರು ಪುತ್ರಿಯರಾದ ಖುಷಿ (5), ಲೀಸಾ (3) ಮತ್ತು ಮಗ ಪವನ್‌ನನ್ನು (ಒಂದೂವರೆ ವರ್ಷ) ಉಮೆಂದ್ ಕೇವತ್ ಕತ್ತು ಹಿಸುಕಿ ಹತ್ಯೆ ಮಾಡಿದ್ದ.