ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ತನ್ನ ಕ್ರಮದಿಂದ ಹಿಂದೆ ಸರಿಯುತ್ತಿಲ್ಲ, ಮೋದಿ ಮಾತನಾಡುತ್ತಿಲ್ಲ: ಕಾಂಗ್ರೆಸ್

Published 1 ಏಪ್ರಿಲ್ 2024, 11:00 IST
Last Updated 1 ಏಪ್ರಿಲ್ 2024, 11:00 IST
ಅಕ್ಷರ ಗಾತ್ರ

ನವದೆಹಲಿ: ಅರುಣಾಚಲ ಪ್ರದೇಶ ತನ್ನದು ಎಂದು ಹೇಳಿಕೊಳ್ಳುವುದನ್ನು ಚೀನಾ ಮುಂದುವರಿಸಿದೆ. ಆದರೆ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್‌ ಸೋಮವಾರ ಕಿಡಿಕಾರಿದೆ.

ಅರುಣಾಚಲವು ತನ್ನ ಭೌಗೋಳಿಕ ಪ್ರದೇಶ ಎಂದು ಇತ್ತೀಚೆಗೆ ಹೇಳಿದ್ದ ಚೀನಾ, ಅಲ್ಲಿನ (ಅರುಣಾಚಲ ಪ್ರದೇಶದ) ಸುಮಾರು 30 ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ಸೂಚಿಸಿ, ಇಂದು ಪಟ್ಟಿ ಬಿಡುಗಡೆ ಮಾಡಿದೆ. ಈ ಸಂಬಂಧ ಕಾಂಗ್ರೆಸ್‌, ತನ್ನ ಟ್ವಿಟರ್‌/ಎಕ್ಸ್‌ ಖಾತೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

'ಲಡಾಖ್‌ ಸೇರಿದಂತೆ, ಅರುಣಾಚಲ ಪ್ರದೇಶದಲ್ಲಿನ ಭಾರತದ ಭೂಮಿಯನ್ನು ಚೀನಾ ನಿರಂತರವಾಗಿ ಆಕ್ರಮಿಸಿಕೊಳ್ಳುತ್ತಿದೆ. ಹಾಗೆಯೇ, ಹೆಸರುಗಳನ್ನೂ ಬದಲಿಸುತ್ತಿದೆ. ಆದರೆ, ಪ್ರಧಾನಿ ಮೋದಿ ಮೌನವಾಗಿದ್ದಾರೆ' ಎಂದು ಕಾಂಗ್ರೆಸ್‌ ಚಾಟಿ ಬೀಸಿದೆ.

'ಮತ್ತೊಂದು ದೋಕ್ಲಾಮ್‌ ಇದ್ದರೆ, ಅದು ಅರುಣಾಚಲ ಪ್ರದೇಶದಲ್ಲಿ ಇದೆ. ಭಾರತದ ಗಡಿಯಲ್ಲಿ ಸುಮಾರು 50–60 ಕಿ.ಮೀ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಹಾಗೂ ಚೀನಾ ಅರುಣಾಚಲ ಪ್ರದೇಶವನ್ನು ಆಕ್ರಮಿಸಿದೆ, ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯೇ ಇಲ್ಲ’ ಎಂಬ ಬಿಜೆಪಿ ಸಂಸದ ತಪಿರ್‌ ಗಾವೊ ಹೇಳಿದ್ದಾರೆ. ಅವರ ಮಾತನ್ನೂ ಪ್ರಧಾನಿ ಮೋದಿ ಆಲಿಸುತ್ತಿಲ್ಲ' ಎಂದು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ಮುಂದುವರಿದು, 'ನಮ್ಮ ನೆಲಕ್ಕೆ ಯಾರೂ ಕಾಲಿಟ್ಟಿಲ್ಲ' ಎಂದು ಪ್ರಧಾನಿ ಮೋದಿ ನೀಡಿರುವ ಕ್ಲೀನ್‌ಚಿಟ್‌ನಿಂದಾಗಿ ಚೀನಾಗೆ ಇಷ್ಟು ಧೈರ್ಯ ಬಂದಿದೆ ಎಂದು ಟೀಕಿಸಿದೆ.‌

ಅರುಣಾಚಲ ಪ್ರದೇಶವನ್ನು ತನ್ನ 'ಜಂಗ್‌ನಾನ್‌' ಪ್ರಾಂತ್ಯ ಎಂದು ಹೇಳಿಕೊಳ್ಳುವ ಚೀನಾ ಅದು ದಕ್ಷಿಣ ಟಿಬೆಟ್‌ನ ತನ್ನ ಒಂದು ಭಾಗ ಎಂದು ಪ್ರತಿಪಾದಿಸುತ್ತಿದೆ. 2017, 2021 ಹಾಗೂ 2023ರಲ್ಲಿಯೂ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಚೀನಿ ಹೆಸರುಗಳನ್ನು ನಾಮಕರಣ ಮಾಡಿದ್ದ ಪಟ್ಟಿ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT