ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಸಂಘರ್ಷ: ‌ಮಹಾರಾಷ್ಟ್ರದಲ್ಲಿ ಅಂಗಡಿಗಳು ನೆಲಸಮ

Published 23 ಜನವರಿ 2024, 15:36 IST
Last Updated 23 ಜನವರಿ 2024, 15:36 IST
ಅಕ್ಷರ ಗಾತ್ರ

ಠಾಣೆ: ಇಲ್ಲಿನ ಮೀರಾರಸ್ತೆಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ನಗರಾಡಳಿತವು ಮಂಗಳವಾರ ಬುಲ್ಡೋಜರ್‌ ಬಳಸಿ ನೆಲಸಮಗೊಳಿಸಿತು. 

ಅಯೋಧ್ಯೆಯ ರಾಮಮಂದಿರ ವಿಚಾರವಾಗಿ ಭಾನುವಾರ ಮತ್ತು ಸೋಮವಾರ ಈ ಪ್ರದೇಶವು ಕೋಮು ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಈ ಬೆನ್ನಲ್ಲೇ ಉತ್ತರ ಪ್ರದೇಶ ಮಾದರಿಯಲ್ಲಿ ‘ಬುಲ್ಡೋಜರ್‌ ಕಾರ್ಯಾಚರಣೆ’ ನಡೆಸಲಾಗಿದೆ.  

ಕಾನೂನುಬಾಹಿರವಾಗಿ ನಿರ್ಮಿಸಿದ್ದ 12–15  ಅಂಗಡಿಗಳನ್ನು ಧ್ವಂಸಮಾಡಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕ್ಷಿಪ್ರ ಕಾರ್ಯಪಡೆ ತಂಡ ಸೇರಿದಂತೆ ಭಾರಿ ಪೊಲೀಸ್‌ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಗಲಭೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಈ ಕ್ರಮ ಜರುಗಿಸಲಾಗಿದೆ.

ಅಂಗಡಿಗಳನ್ನು ನೆಲಸಮ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೂ ಮುನ್ನ, ಭಾನುವಾರ ರಾತ್ರಿ ನಯಾ ನಗರದಲ್ಲಿ ರ‍್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಎರಡು ಸಮುದಾಯಗಳ ಮಧ್ಯೆ ಸಂಘರ್ಷ ನಡೆದಿತ್ತು. ಉದ್ರಿಕ್ತ ಗುಂಪು ಕಬ್ಬಿಣದ ಸಲಾಕೆ, ಬಡಿಗೆ, ಬ್ಯಾಟ್‌ಗಳನ್ನು ಹಿಡಿದು ಧಾರ್ಮಿಕ ಘೋಷಣೆಗಳನ್ನು ಕೂಗಿತ್ತು. ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿತ್ತು. ಕಲ್ಲು ತೂರಾಟ ನಡೆಸಿ ಕಾರಿಗೆ ಹಾನಿ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆ ನಂತರ ಕೊಲೆ ಯತ್ನದ ಆರೋಪದ ಮೇಲೆ 50–60 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 13 ಜನರನ್ನು ಬಂಧಿಸಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಎಫ್‌ಟಿಐಐನಲ್ಲಿ ಪ್ರಕ್ಷುಬ್ಧ ವಾತಾವರಣ

ಮುಂಬೈ: ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ‌(ಎಫ್‌ಟಿ ಐಐ) ಕ್ಯಾಂಪಸ್‌ನಲ್ಲಿ ‘ರಿಮೆಂಬರ್‌ ಬಾಬರಿ: ಡೆತ್‌ ಆಫ್‌ ಕಾನ್‌ಸ್ಟಿಟ್ಯೂಷನ್‌’ (ಸಂವಿಧಾನ ಅಂತ್ಯವಾದ ಬಾಬರಿ ಮಸೀದಿ ಧ್ವಂಸ ಘಟನೆ ನೆನಪಿನಲ್ಲಿಡಿ) ಎಂದು ಬರೆದಿರುವ ಬ್ಯಾನರ್‌ ಅಳವಡಿಕೆ ಬಳಿಕ ಉಂಟಾದ ಸಂಘರ್ಷದಿಂದ ಕ್ಯಾಂಪಸ್‌ನಲ್ಲಿ ಪ್ರಕ್ಷುಬ್ಧತೆ ಮನೆಮಾಡಿದೆ.

ಪುಣೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬ್ಯಾನರ್‌ ಅಳವಡಿಸಿದ್ದು ಎಫ್‌ಟಿಐಐ ವಿದ್ಯಾರ್ಥಿ ಸಂಘಟನೆಗಳು ಎಂದು ಹೇಳಲಾಗುತ್ತಿದೆ. ಬಲಪಂಥೀಯ ಕಾರ್ಯಕರ್ತರು ಕ್ಯಾಂಪಸ್‌ ಒಳಗೆ ಧಾವಿಸಿ ಬ್ಯಾನರ್‌ ಹರಿದು ಸುಟ್ಟುಹಾಕಿದರು. 

ಈ ವೇಳೆ ವಿದ್ಯಾರ್ಥಿಗಳು ಮತ್ತು ಬಲಪಂಥೀಯ ಕಾರ್ಯಕರ್ತರ ಮಧ್ಯೆ ವಾಗ್ವಾದ ಏರ್ಪಡುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಲು ಸಿ.ಸಿ.ಟಿ.ವಿಗಳನ್ನು ಪರಿಶೀಲಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಳುಮಾಡುವವರ ವಿರುದ್ಧ ಶೂನ್ಯಸಹಿಷ್ಠು ಕ್ರಮ ಜರುಗಿಸಲಾಗುವುದು  
–ದೇವೇಂದ್ರ ಪಡಣವೀಸ್, ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT