ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು, ಸಂಸದರ ನಡವಳಿಕೆ ಭಾರತೀಯ ಮೌಲ್ಯಕ್ಕೆ ತಕ್ಕಂತಿರಬೇಕು: ಪ್ರಧಾನಿ ಮೋದಿ

Last Updated 17 ನವೆಂಬರ್ 2021, 8:59 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವದತ್ತ ಹೆಜ್ಜೆಯಿಡುತ್ತಿದ್ದು, ಮುಂದಿನ 25 ವರ್ಷಗಳ ಕಾಲ ದೇಶಕ್ಕಾಗಿ ಕೆಲಸ ಮಾಡುವುದೇ ನಮ್ಮೆಲ್ಲರ ಮಂತ್ರವಾಗಬೇಕು. ಈ ಸಂದೇಶವು ಸಂಸತ್ತು ಮತ್ತು ರಾಜ್ಯಗಳ ಶಾಸಕಾಂಗಗಳಿಂದಲೇ ಹೊರಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕರೆ ನೀಡಿದರು.

ಅಖಿಲ ಭಾರತ ಮಟ್ಟದ ಶಾಸನಸಭೆಗಳ ಅಧ್ಯಕ್ಷರ 82ನೇ ಸಮ್ಮೇಳನವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಅವರು, ದೇಶದ ಏಕತೆ, ಸಮಗ್ರತೆಯ ಬಗ್ಗೆ ಭಿನ್ನ ಧ್ವನಿ ಬಾರದಂತೆ ಎಚ್ಚರವಹಿಸಬೇಕಾದದ್ದು ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಪ್ರತಿಪಾದಿಸಿದರು.

‘ನಮ್ಮ ಏಕತೆಯೇ ನಮ್ಮ ವೈವಿಧ್ಯತೆಯನ್ನು ರಕ್ಷಿಸುತ್ತಿದೆ’ ಎಂದು ಇದೇ ವೇಳೆ ಪ್ರಧಾನಿ ಹೇಳಿದರು.

ಶಾಸಕಾಂಗಗಳಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಚರ್ಚೆಗಳಿಗೆ ಪ್ರತ್ಯೇಕ ಸಮಯ ಹೊಂದಿಸುವ ಕುರಿತು ಆಲೋಚಿಸಬಹುದು ಎಂದ ಪ್ರಧಾನಿ ಅವರು, ಶಾಸನಸಭೆಗಳಲ್ಲಿ ಗಂಭೀರ, ಘನತೆಯಿಂದ ಕೂಡಿದ ಚರ್ಚೆಗಳಾಗಬೇಕು ಎಂದರು.

ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಭಾರತೀಯ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪ್ರಜಾಪ್ರಭುತ್ವವು ಭಾರತದಲ್ಲಿ ಕೇವಲ ಒಂದು ವ್ಯವಸ್ಥೆಯಲ್ಲ, ಅದು ದೇಶದ ಸ್ವರೂಪವೇ ಆಗಿದೆ ಎಂದು ಅವರು ಹೇಳಿದರು.

‘ಶಾಸನಸಭೆಗಳ ಘನತೆ ಉಳಿಸಬೇಕು’ (ಶಿಮ್ಲಾ ವರದಿ): ಶಾಸನಸಭೆಗಳಲ್ಲಿ ನಡೆಯುತ್ತಿರುವ ಅಧಿವೇಶನಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಾನೂನು ರಚನೆಗೆ ಸಂಬಂಧಿಸಿದಂತೆ ಸಮರ್ಪಕ ಚರ್ಚೆಗಳಾಗುತ್ತಿಲ್ಲ ಎಂದು ಲೋಕಸಭಾ ಸ್ಫಿಕರ್‌ ಓಂ ಬಿರ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.

ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ಅಖಿಲ ಭಾರತ ಶಾಸನಸಭೆಗಳ ಅಧ್ಯಕ್ಷರ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಸಮಾಲೋಚಿಸಿ ಕೆಲ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡು, ಶಾಸನಸಭೆಗಳ ಘನತೆಯನ್ನು ಉಳಿಸಬೇಕು ಎಂದು ಅವರು ಸಲಹೆ ನೀಡಿದರು.

ಜನರ ಹಕ್ಕುಗಳ ರಕ್ಷಣೆಗೆ ಪೂರಕವಾಗಿ ಶಾಸನಸಭೆಗಳು ತಮ್ಮ ಕಾರ್ಯವಿಧಾನ ಮತ್ತು ನಿಯಮಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT