ನವದೆಹಲಿ: ‘ಅಧಿಕಾರದ ಗದ್ದುಗೆ ಏರುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಭಯೋತ್ಪಾದಕರ ಜೊತೆ ಕೈಜೋಡಿಸುವುದಕ್ಕೂ ಹಿಂಜರಿಯುವುದಿಲ್ಲ’ ಎಂದು ಬಿಜೆಪಿ ಹರಿಹಾಯ್ದಿದೆ.
ಭಯೋತ್ಪಾದನೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಸುದ್ದಿಗೋಷ್ಠಿ ಹಮ್ಮಿಕೊಳ್ಳುವ ಮೂಲಕ ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವುದನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಟೀಕಿಸಿದ್ದಾರೆ.
‘ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಶಂಕಿತ ಭಯೋತ್ಪಾದಕಿ ಇಶ್ರತ್ ಜಹಾನ್ ಅವರನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಆಗ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಜಹಾನ್ ತಮ್ಮ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾಗಿಲಷ್ಕರ್ ಎ ತಯಬಾ ಉಗ್ರ ಸಂಘಟನೆಯೇ ಒಪ್ಪಿಕೊಂಡಿತ್ತು. ಹೀಗಿದ್ದರೂ ಕಾಂಗ್ರೆಸ್ ಆಕೆಯನ್ನು ‘ಮುಗ್ಧೆ’ ಎಂದು ಕರೆದಿತ್ತು. ಲಷ್ಕರ್ ಎ ತಯಬಾ ನಾಯಕ ಹಫೀಜ್‌ಸಯೀದ್ ಆಗ ಕಾಂಗ್ರೆಸ್ ಉತ್ತಮ ಪಕ್ಷ ಎಂದು ಪ್ರಶಂಶಿಸಿದ್ದ. ಇದು ಕಾಂಗ್ರೆಸ್‌ನ ‘ಟ್ರ್ಯಾಕ್ ರೆಕಾರ್ಡ್’ ಎಂದು ಪಾತ್ರ ಕಿಡಿಕಾರಿದ್ದಾರೆ.
ಬಿಜೆಪಿ ‘ನಕಲಿ ಹಿಂದುತ್ವ’ದ ಮುಖವಾಡ ಧರಿಸಿದ್ದಾಗಿ ಟೀಕಿಸಿದ್ದ ಕಾಂಗ್ರೆಸ್, ದೇಶದ 22 ಸ್ಥಳಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಆ ಪಕ್ಷದ ಬಣ್ಣ ಬಯಲು ಮಾಡುವುದಾಗಿ ತಿಳಿಸಿತ್ತು. ಆಡಳಿತ ಪಕ್ಷವು ಭಯೋತ್ಪಾದಕರ ಜೊತೆ ನಂಟು ಹೊಂದಿದೆ ಎಂದು ಆರೋಪಿಸಿತ್ತು.
ಟೇಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಿಯಾಜ್ ಅತ್ತಾರಿ ಹಾಗೂ ಜಮ್ಮುವಿನಲ್ಲಿ ಬಂಧನಕ್ಕೊಳಗಾಗಿದ್ದ ಉಗ್ರ ತಾಲಿಬ್ ಹುಸೇನ್ ಅವರು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದಾಗಿ ದೂರಿತ್ತು. ಕಾಂಗ್ರೆಸ್ ಆರೋಪವನ್ನು ಬಿಜೆಪಿ ತಳ್ಳಿಹಾಕಿತ್ತು.