ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕುಟುಂಬ ಹೊರತಾದ ನಾಯಕತ್ವ ಕಾಂಗ್ರೆಸ್‌ಗೆ ಅಗತ್ಯ: ಶರ್ಮಿಷ್ಠ ಮುಖರ್ಜಿ

Published 5 ಫೆಬ್ರುವರಿ 2024, 15:49 IST
Last Updated 5 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ಜೈಪುರ: ‘ನೆಹರು ಮತ್ತು ಗಾಂಧಿ ಕುಟುಂಬದವರನ್ನು ಹೊರತುಪಡಿಸಿ, ಹೊರಗಿನವರು ನಾಯಕತ್ವ ವಹಿಸುವುದನ್ನು ಎದುರು ನೋಡುವ ಕಾಲ ಬಂದಿದೆ’ ಎಂದು ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಜೈಪುರ ಸಾಹಿತ್ಯ ಸಮ್ಮೇಳನದ 17ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು ಕಡಿಮೆಯಾಗಿರಬಹುದು. ಆದರೆ ರಾಷ್ಟ್ರ ರಾಜಕಾರಣದಲ್ಲಿ ಪಕ್ಷದ ಅಸ್ತಿತ್ವ ಇಂದಿಗೂ ಸದೃಢವಾಗಿದೆ’ ಎಂದಿದ್ದಾರೆ.

‘ಕಾಂಗ್ರೆಸ್ ಈಗಲೂ ಪ್ರಮುಖ ವಿರೋಧ ಪಕ್ಷವಾಗಿದೆ. ಅದರ ಸ್ಥಾನ ನಿರ್ವಿವಾದ. ಆದರೆ ಅದರ ಈಗಿರುವ ಸ್ಥಿತಿಯನ್ನು ಉತ್ತಮಪಡಿಸುವುದು ಹೇಗೆ ಎಂಬುದೇ ಪ್ರಶ್ನೆ. ಈ ಕುರಿತು ಪಕ್ಷದ ನಾಯಕರು ಚಿಂತಿಸಬೇಕು’ ಎಂದು ಹೇಳಿದ್ದಾರೆ.

‘ಪಕ್ಷದ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕೆಂದರೆ ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯನ್ನು ಎಲ್ಲಾ ಹಂತಗಳಲ್ಲೂ ಇರುವಂತೆ ನೋಡಿಕೊಳ್ಳಬೇಕು. ಸದಸ್ಯತ್ವ ಅಭಿಯಾನ, ಪಕ್ಷದೊಳಗಿನ ಚುನಾವಣೆ, ನೀತಿ ನಿರೂಪಣೆಯಲ್ಲಿ ಕಾರ್ಯಕರ್ತಗರ ಪಾಲುದಾರಿಕೆಯೇ ಮುಖ್ಯ ಎಂಬ ಅಂಶವನ್ನು ತಂದೆಯವರು ತಮ್ಮ ದಿನಚರಿಯಲ್ಲೂ ದಾಖಲಿಸಿದ್ದರು’ ಎಂದು ಶರ್ಮಿಷ್ಠ ನೆನಪಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಹುಲ್ ಗಾಂಧಿ ಅವರು ಏನು ಎಂದು ಹೇಳುವುದು ನನ್ನ ಕೆಲಸವಲ್ಲ. ಅಷ್ಟುಮಾತ್ರವಲ್ಲ, ಯಾವುದೇ ವ್ಯಕ್ತಿಯನ್ನು ವಿವರಿಸುವುದೂ ನನ್ನಿಂದ ಸಾಧ್ಯವಿಲ್ಲ. ನನ್ನ ತಂದೆ ಕುರಿತು ಹೇಳಿ ಎಂದು ಯಾರಾದರು ಕೇಳಿದರೆ, ಅವರನ್ನು ವಿವರಿಸುವುದೂ ನನ್ನಿಂದ ಅಸಾಧ್ಯ’ ಎಂದು ಹೇಳಿದ್ದಾರೆ.

‘ಆದರೆ ಕಾಂಗ್ರೆಸ್‌ನ ಒಬ್ಬ ಬೆಂಬಲಿಗಳಾಗಿ ಮತ್ತು ಪ್ರಜ್ಞಾನವಂತ ನಾಗರಿಕಳಾಗಿ ನನಗೆ ಪಕ್ಷದ ಸ್ಥಿತಿ ಕುರಿತು ಆತಂಕವಿದೆ. ನೆಹರು ಮತ್ತು ಗಾಂಧಿ ಕುಟುಂಬದ ನಾಯಕತ್ವದ ಹೊರತಾಗಿ ನೋಡುವ ಕಾಲ ಬಂದಿದೆ. ಜನರು ನಂಬಲಿ ಬಿಡಲಿ, ನಾನೊಬ್ಬಳು ಕಟ್ಟಾ ಕಾಂಗ್ರೆಸ್‌ವಾದಿ. ಆದರೆ ಕಾಂಗ್ರೆಸ್‌ ತನ್ನ ಸಿದ್ಧಾಂತಗಳನ್ನು ನಿಜವಾಗಿಯೂ ಎತ್ತಿಹಿಡಿಯಬೇಕೆಂದಿದ್ದರೆ ಅದರ ಪ್ರಮುಖ ಸ್ಥಾನದಲ್ಲಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್‌ನ ಮೂಲಸಿದ್ಧಾಂತಗಳಾದ ಬಹುತ್ವ, ಸಹಿಷ್ಣುತೆ, ಒಳಗೊಳ್ಳುವಿಕೆ, ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯವನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಪಕ್ಷದ ನಾಯಕರೇ ಪ್ರಶ್ನಿಸಿಕೊಳ್ಳಬೇಕಿದೆ’ ಎಂದು ಶರ್ಮಿಷ್ಠ ಹೇಳಿದ್ದಾರೆ.

‘ವಾಕ್ ಸ್ವಾತಂತ್ರ್ಯ ಎಂದರೆ ತಮ್ಮ ನಾಯಕನನ್ನು ಹೊಗಳುವುದು ಎಂದಷ್ಟೇ ಅಲ್ಲ. ನಾಯಕತ್ವವನ್ನು ಪ್ರಶ್ನೆ ಮಾಡಿದ ಮರುಕ್ಷಣವೇ ಇಡೀ ವ್ಯವಸ್ಥೆಯೇ ಅವರನ್ನು ಮೂಲೆಗುಂಪು ಮಾಡುತ್ತದೆ’ ಎಂದಿರುವ ಶರ್ಮಿಷ್ಠ, ವಿರೋಧ ಪಕ್ಷಗಳ ಇಂಡಿಯಾ ಬಣವನ್ನು, ‘ಇಂಡಿ ಒಕ್ಕೂಟ’ ಎಂದು ಹೇಳಿದರು.

‘ಇಂಡಿಯಾ ಒಕ್ಕೂಟ ರಚನೆ ಸಂದರ್ಭದಲ್ಲಿ, ‘ಇದು ವಿಫಲವಾಗಲಿದೆ’ ಎಂದು ನಾನು ಎಕ್ಸ್‌ನಲ್ಲಿ ಬರೆದಿದ್ದೆ. ಯವುದೇ ರಾಜಕೀಯ ಪಕ್ಷಗಳ ಹೆಸರು ದೇಶದ ಹೆಸರಿಗೆ ಸರಿಸಮನಾಗಿರಬಾರದು. ಇದು ನನ್ನ ಆಲೋಚನೆಯಾಗಿತ್ತು. ಅದನ್ನೇ ಬರೆದಿದ್ದೆ’ ಎಂದಿದ್ದಾರೆ.

ಇಂಡಿಯಾ ಒಕ್ಕೂಟದ ನಾಯಕತ್ವ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರ್ಮಿಷ್ಠ, ‘ಒಕ್ಕೂಟದಲ್ಲಿ ಬಹಳಷ್ಟು ಜನ ನಾಯಕರಿದ್ದಾರೆ. ವಿವಾದವನ್ನು ಪರಸ್ಪರ ಬಗೆಹರಿಸಿಕೊಳ್ಳಬೇಕು. ಸೀಟು ಹಂಚಿಕೆ ಕುರಿತೂ ತಮ್ಮ ನಡುವಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಬರಲಿರುವ ಲೋಕಸಭಾ ಚುನಾವಣೆವರೆಗೂ ಈ ಒಕ್ಕೂಟ ಇರಲಿದೆಯೇ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT