ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನು ಅವಧಿ ಮುಕ್ತಾಯ: ತಿಹಾರ್ ಜೈಲಿಗೆ ಮರಳಿದ ಅರವಿಂದ ಕೇಜ್ರಿವಾಲ್

Published 2 ಜೂನ್ 2024, 11:46 IST
Last Updated 2 ಜೂನ್ 2024, 11:46 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು( ಭಾನುವಾರ) ತಿಹಾರ್ ಜೈಲಿನಲ್ಲಿ ಶರಣಾದರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಮಾರ್ಚ್‌ ತಿಂಗಳಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜೂನ್ 1ರವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

ಜೈಲಿಗೆ ಶರಣಾಗುವ ಮುನ್ನ ಅವರು, ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಕನ್ನಾಟ್ ಪ್ಲೇಸ್‌ನ ಹನುಮಾನ್ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪಕ್ಷದ ಕಚೇರಿಯಲ್ಲಿ ಎಎಪಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಕೇಜ್ರಿವಾಲ್

ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಕೇಜ್ರಿವಾಲ್

(ಪಿಟಿಐ ಚಿತ್ರ)

ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದರಿಂದ ಮತ್ತೆ ಜೈಲಿಗೆ:

ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಅಲ್ಲ, ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕಾಗಿ ಮತ್ತೆ ಜೈಲಿಗೆ ಹೋಗುತ್ತಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ದೇಶವನ್ನು ಉಳಿಸಲು ಪ್ರಚಾರ ಮಾಡಿದ್ದೇನೆ ಎಂದರು.

ಮತಗಟ್ಟೆ ಸಮೀಕ್ಷೆಗಳು ನಕಲಿ:

ಬಿಜೆಪಿ ನೇತೃತ್ವದ ಎನ್‌ಡಿಎ 3ನೇ ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಆದರೆ ಈ ಮತಗಟ್ಟೆ ಸಮೀಕ್ಷೆಗಳು ನಕಲಿ ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು. ನಿನ್ನೆ ಮತಗಟ್ಟೆ ಸಮೀಕ್ಷೆಗಳು ಹೊರಬಂದಿವೆ. ಅವು ನಕಲಿ ಎಂದು ನಾನು ಹೇಳಬಲ್ಲೆ. ಏಕೆಂದರೆ ಒಂದು ಮತಗಟ್ಟೆ ಸಮೀಕ್ಷೆ ರಾಜಸ್ಥಾನದಲ್ಲಿ ಬಿಜೆಪಿಗೆ 33 ಸ್ಥಾನಗಳನ್ನು ನೀಡಿದೆ. ಆದರೆ ಅಲ್ಲಿ ಕೇವಲ 25 ಸ್ಥಾನಗಳಿವೆ ಎಂದರು.

ನಾನು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದೇನೆ. ಸರ್ವಾಧಿಕಾರವನ್ನು ಕೊನೆಗೊಳಿಸಲು ಗಾಂಧೀಜಿ ನಮ್ಮ ಸ್ಫೂರ್ತಿ. ಬಳಿಕ ಹನುಮಾನ್ ಮಂದಿರಕ್ಕೆ ಹೋಗಿದ್ದೇನೆ. ನನಗೆ ಭಜರಂಗಬಲಿಯ ಆಶೀರ್ವಾದವಿದೆ. ಜೂನ್ 4ರ ಮಂಗಳವಾರ ಭಜರಂಗಬಲಿ ಸರ್ವಾಧಿಕಾರವನ್ನು ನಾಶಪಡಿಸುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT