ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯಂ ಬಸ್ ಸೇವೆ ಪರಿಚಯಿಸಲಿರುವ ದೆಹಲಿ ಸರ್ಕಾರ: ಕೇಜ್ರಿವಾಲ್

Published 20 ಅಕ್ಟೋಬರ್ 2023, 13:03 IST
Last Updated 20 ಅಕ್ಟೋಬರ್ 2023, 13:03 IST
ಅಕ್ಷರ ಗಾತ್ರ

ನವದೆಹಲಿ: ಮೇಲ್ಮಧ್ಯಮ ವರ್ಗದವರು ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡುವಂತೆ ಉತ್ತೇಜಿಸಲು ದೆಹಲಿ ಸರ್ಕಾರವು ಪ್ರೀಮಿಯಂ ಬಸ್‌ ಸೇವೆಯನ್ನು ಪರಿಚಯಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌ಜಿ) ವಿ. ಕೆ ಸಕ್ಸೇನಾ ಅವರ ಅನುಮೋದನೆ ನಂತರ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

‘ದೆಹಲಿಯಲ್ಲಿ ಮೆಟ್ರೊ ಸೇವೆ ಪ್ರಾರಂಭವಾದಾಗ, ಅನೇಕ ಜನರು ಸ್ಕೂಟರ್‌ ಬಳಸುವುದನ್ನು ನಿಲ್ಲಿಸಿ ಮೆಟ್ರೊ ಬಳಸಲಾರಂಭಿಸಿದರು. ಆದರೆ, ಮೆಟ್ರೊ ರೈಲುಗಳಲ್ಲಿನ ಜನಸಂದಣಿಯಿಂದಾಗಿ ಮತ್ತೆ ಜನರು ತಮ್ಮ ಸ್ವಂತ ವಾಹನಗಳನ್ನು ಬಳಸಲಾರಂಭಿಸಿದ್ದಾರೆ. ಬಹುತೇಕ ಕೆಳ ಮಧ್ಯಮ ವರ್ಗ ಮತ್ತು ಸಾಮಾನ್ಯ ವರ್ಗದ ಜನರು ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಹಾಗೆಯೇ ಈ ಯೋಜನೆಯಿಂದ ಮೇಲ್ಮಧ್ಯಮ ವರ್ಗದ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುವಂತಾಗುತ್ತದೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ಈ ಯೋಜನೆಯ ಅಡಿಯಲ್ಲಿ, ಪರವಾನಗಿ ಪಡೆಯುವ ಆಪರೇಟರ್ ಕನಿಷ್ಠ ಒಂಬತ್ತು ಸೀಟುಗಳಿರುವ ಹವಾನಿಯಂತ್ರಿತ (ಎಸಿ) ಬಸ್‌ಗಳನ್ನು ನಿರ್ವಹಿಸಬೇಕಾಗುತ್ತದೆ. ಬಸ್‌ಗಳಲ್ಲಿ ಯಾವುದೇ ಪ್ರಯಾಣಿಕರು ನಿಂತುಕೊಳ್ಳಲು ಅವಕಾಶವಿರುವುದಿಲ್ಲ ಮತ್ತು ಬಸ್‌ ಪ್ರಯಾಣ ದರವನ್ನು ಡಿಜಿಟಲ್‌ ಪಾವತಿ ಮಾಡಬೇಕು. ಅಲ್ಲದೆ, ಆಪರೇಟರ್ ಕನಿಷ್ಠ 25 ಬಸ್‌ಗಳನ್ನು ನಿರ್ವಹಿಸಬೇಕಾಗುತ್ತದೆ ಹಾಗೂ ಆ ಎಲ್ಲಾ ಬಸ್‌ಗಳು 2025ರ ಜನವರಿ 1ಕ್ಕೆ ಸಂಪೂರ್ಣ ಎಲೆಕ್ಟ್ರಿಕ್‌ ಆಗಿರಬೇಕು’ ಎಂದು ಕೇಜ್ರಿವಾಲ್‌ ತಿಳಸಿದ್ದಾರೆ.

ಬೇಡಿಕೆಯ ಆಧಾರದ ಮೇಲೆ ಈ ಬಸ್‌ಗಳ ಮಾರ್ಗಗಳನ್ನು ನಿರ್ಧರಿಸಲಾಗುವುದು ಮತ್ತು ಆಪರೇಟರ್‌ಗಳು ಮಾರ್ಗಗಳ ಬಗ್ಗೆ ಸಾರಿಗೆ ಇಲಾಖೆಗೆ ತಿಳಿಸಬೇಕು. ಈ ಯೋಜನೆಯ ಬಸ್‌ಗಳ ದರವು ದೆಹಲಿ ಸಾರಿಗೆ ನಿಗಮದ ಹವಾನಿಯಂತ್ರಿತ ಬಸ್‌ಗಳ ಗರಿಷ್ಠ ದರಕ್ಕಿಂತ ಅಧಿಕವಾಗಿರುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT