ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್‌ ವಜಾ ಕೋರಿದ್ದ ಅರ್ಜಿ ನಿರಾಕರಣೆ

Published 28 ಮಾರ್ಚ್ 2024, 9:39 IST
Last Updated 28 ಮಾರ್ಚ್ 2024, 9:39 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬಂಧನದಲ್ಲಿರುವ ಅರವಿಂದ್‌ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಅರ್ಜಿಯನ್ನು ಪರಿಶೀಲಿಸಿದ ಹಂಗಾಮಿ ನ್ಯಾಯಮೂರ್ತಿ ಮನಮೋಹನ್‌ ಅವರನ್ನೊಳಗೊಂಡ ನ್ಯಾಯಪೀಠವು, ‘ಅರವಿಂದ್‌ ಅವರನ್ನು ಸರ್ಕಾರದಿಂದ ದೂರವಿರಿಸಲು ಸೂಕ್ತವಾಗಿರುವ ಯಾವುದೇ ಕಾನೂನು ನಿಬಂಧನೆಗಳನ್ನು ಅರ್ಜಿದಾರರು ತಿಳಿಸಿಲ್ಲ. ಇದರಲ್ಲಿ ನ್ಯಾಯಾಂಗವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸಾಂವಿಧಾನಿಕ ವೈಫಲ್ಯ ಕಂಡುಬಂದಲ್ಲಿ ಕಾರ್ಯಾಂಗವು ಅದನ್ನು ಸರಿಪಡಿಸುತ್ತದೆ’ ಎಂದು ತಿಳಿಸಿದೆ.

‘ಲೆಫ್ಟಿನೆಂಟ್‌ ಗವರ್ನರ್‌, ರಾಷ್ಟ್ರಪತಿ ಅವರು ಮತ್ತು ಸಚಿವ ಸಂಪುಟ ಈ ಬಗ್ಗೆ ತೀರ್ಮಾನಿಸಬೇಕು. ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಎಂದು ಅವರಿಗೆ ಗೊತ್ತಿದೆ. ರಾಷ್ಟ್ರಪತಿಗಳ ಅಥವಾ ರಾಜ್ಯಪಾಲರ ಅಧಿಕಾರವನ್ನು ನಾವು ಪ್ರಯೋಗಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಇ.ಡಿ. ಬಂಧನದಲ್ಲಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ, ಅವರನ್ನು ವಜಾಗೊಳಿಸುವಂತೆ ಆದೇಶಿಸಬೇಕು‘ ಎಂದು ಕೋರಿ ಸುರ್ಜಿತ್‌ ಸಿಂಗ್‌ ಯಾದವ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT