ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ (ಎಂಸಿಡಿ) ತೆರವಾಗಿರುವ ಸ್ಥಾಯಿ ಸಮಿತಿಯ ಒಂದು ಸ್ಥಾನಕ್ಕೆ ಶುಕ್ರವಾರವೇ ಚುನಾವಣೆ ನಡೆಸುವಂತೆ ಪಾಲಿಕೆಯ ಆಯುಕ್ತರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಗುರುವಾರ ತಡರಾತ್ರಿ ಆದೇಶಿಸಿದ್ದಾರೆ.
ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಶುಕ್ರವಾರ ಮಧ್ಯಾಹ್ನ 1ಕ್ಕೆ ಚುನಾವಣೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿರುವುದಾಗಿ ಪಾಲಿಕೆ ಆಯುಕ್ತ ಅಶ್ವನಿ ಕುಮಾರ್ ತಡರಾತ್ರಿ ಪ್ರಕಟಿಸಿದ್ದಾರೆ.
ಸಮಿತಿ ಸದಸ್ಯರಾಗಿದ್ದ ಬಿಜೆಪಿ ನಾಯಕ ಕಮಲ್‌ಜೀತ್ ಸೆಹ್ರಾವತ್ ಅವರು ದೆಹಲಿ ಪಶ್ಚಿಮ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಬಳಿಕ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಸಲು ಪಾಲಿಕೆಯ ಹೆಚ್ಚುವರಿ ಆಯುಕ್ತ ಜಿತೇಂದ್ರ ಯಾದವ್ ಅವರನ್ನು ಎಂಸಿಡಿ ಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ.
ಗುರುವಾರ ಸದಸ್ಯರ ಗದ್ದಲದಿಂದಾಗಿ ಚುನಾವಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಲಾಗಿತ್ತು. ಆದರೆ, ಮೇಯರ್ ಶೆಲ್ಲಿ ಒಬೆರಾಯ್ ಅವರ ಈ ಆದೇಶವನ್ನು ರದ್ದು ಮಾಡಿದ ಸಕ್ಸೇನಾ, ರಾತ್ರಿ 10ರೊಳಗೆ ವರದಿ ನೀಡುವಂತೆ ಆಯುಕ್ತರಿಗೆ ಸೂಚಿಸಿದ್ದರು.
ಮೇಯರ್ ಅವರು ಚುನಾವಣೆ ನಡೆಸಲು ನಿರಾಕರಿಸಿದರೆ ಉಪಮೇಯರ್ ಅವರನ್ನು ಚುನಾವಣೆಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ ಹಾಗೂ ಅವರೂ ನಿರಾಕರಿಸಿದರೆ ಹಿರಿಯ ಸದಸ್ಯರಿಗೆ ಅಧ್ಯಕ್ಷತೆ ವಹಿಸಿಕೊಡುವಂತೆ ನಿರ್ದೇಶಿಸಿದ್ದರು.
ಆದಾಗ್ಯೂ, ರಾತ್ರಿ 11ರ ವರೆಗೂ ಅನಿಶ್ಚಿತತೆ ಮುಂದುವರಿದ ಕಾರಣ ಎಂಸಿಡಿ ಅಧಿಕಾರಿಗಳು ಚುನಾವಣೆ ಮುಂದೂಡಿರುವುದಾಗಿ ಮತ್ತೆ ಘೋಷಿಸಿದರು. ಇದಾದ ಬಳಿಕ ತಡರಾತ್ರಿ ಪುನಃ ಆದೇಶ ನೀಡಿರುವ ಎಲ್‌ಜಿ, ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಸುವಂತೆ ಆಯುಕ್ತರಿಗೆ ಸೂಚಿಸಿದ್ದಾರೆ. ಹೀಗಾಗಿ, ಗುರುವಾರ ಇಡೀ ದಿನ ನಡೆದ ನಾಟಕೀಯ ಬೆಳವಣಿಗೆಗಳಿಗೆ ಎಂಸಿಡಿ ಸಾಕ್ಷಿಯಾಯಿತು.