ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಚೋದನಕಾರಿ ಭಾಷಣ: ಅರುಂಧತಿ ವಿರುದ್ಧ ಮುಂದಿನ ವಾರ ಆರೋಪ ಪಟ್ಟಿ ಸಲ್ಲಿಕೆ?

Published 18 ಜೂನ್ 2024, 16:02 IST
Last Updated 18 ಜೂನ್ 2024, 16:02 IST
ಅಕ್ಷರ ಗಾತ್ರ

ನವದೆಹಲಿ: ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಲೇಖಕಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಮಾಜಿ ಪ್ರಾಧ್ಯಾಪಕರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ದಾಖಲಾದ ಪ್ರಕರಣದಲ್ಲಿ ದೆಹಲಿ ಪೊಲೀಸರು ಮುಂದಿನ ವಾರ ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

‘ಆಜಾದಿ –ದಿ ಓನ್ಲೀ ವೇ’ ವೇದಿಕೆಯಡಿ 2010ರ ಅಕ್ಟೋಬರ್‌ 21ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ರಾಯ್‌ ಮತ್ತು ಕಾಶ್ಮೀರದ ಸೆಂಟ್ರಲ್‌ ವಿ.ವಿಯ ಮಾಜಿ ಪ್ರಾಧ್ಯಾಪಕ ಶೇಖ್‌ ಶೌಕತ್ ಹುಸೇನ್‌ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್ ಅವರು 2010ರ ಅ.28ರಂದು ತಿಲಕ್‌ಮಾರ್ಗ್ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದರು. ನಂತರ, ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್‌ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. 

ಯುಎಪಿಎ ಕಲಂ 45(1)ರ ಅಡಿಯಲ್ಲಿ ಇವರಿಬ್ಬರ ವಿರುದ್ಧ ಕ್ರಮ ಜರುಗಿಸಲು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಶುಕ್ರವಾರ ಹೊಸದಾಗಿ ಅನುಮತಿ ನೀಡಿದ್ದರು.

ಕ್ರೈಂ ಬ್ರಾಂಚ್ ಅಧಿಕಾರಿಗಳು ಒಂದು ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಭಾಷಣದ ವಿಡಿಯೊಗಳು ಮತ್ತು ವಿಡಿಯೊಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ತನಿಖಾ ತಂಡವು ಪುರಾವೆಗಳಾಗಿ ನೀಡಿವೆ. ಅದೇ ರೀತಿ, ಕೆಲವು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನೂ ತನಿಖೆಯ ಭಾಗವಾಗಿ ಒದಗಿಸಲಾಗಿದೆ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT