ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹಿಂಸಾಚಾರದ ವೇಳೆ ಶಿವ ದೇಗುಲ ರಕ್ಷಿಸಿದ ಮುಸ್ಲಿಮರು

Last Updated 28 ಫೆಬ್ರುವರಿ 2020, 14:22 IST
ಅಕ್ಷರ ಗಾತ್ರ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ವೇಳೆ ಮುಸ್ಲಿಮರು ಶಿವ ದೇಗುಲವೊಂದನ್ನು ದುಷ್ಕರ್ಮಿಗಳ ದಾಳಿಯಿಂದ ರಕ್ಷಿಸಿರುವುದು ತಿಳಿದುಬಂದಿದೆ.

ಫೆಬ್ರುವರಿ 25ರಂದು ರಾತ್ರಿ ಇಂದಿರಾ ವಿಹಾರ್ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಶಿವ ದೇಗುಲದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲು ಮುಂದಾಗಿತ್ತು. ಧಾರ್ಮಿಕ ಕೇಂದ್ರಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸುತ್ತಿತ್ತು. ಆ ಸಂದರ್ಭದಲ್ಲಿ, ಶಕೀಲ್ ಅಹ್ಮದ್ ಎಂಬ ವ್ಯಕ್ತಿ ಮತ್ತು ಇತರ ನಿವಾಸಿಗಳು ದೇಗುಲವನ್ನು ರಕ್ಷಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಗುಂಪೊಂದು ದಾಳಿ ನಡೆಸಲು ಬಂದಾಗ ನಾವು ಶಿವ ದೇಗುಲ ಮತ್ತು ಮಸೀದಿಯನ್ನು ರಕ್ಷಿಸಿದೆವು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ನಾವು ದೇಗುಲವನ್ನು ರಕ್ಷಿಸಿದೆವು. ಇಲ್ಲವಾದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ದೇವಾಲಯ ಧ್ವಂಸ ಮಾಡಲಾಗಿದೆ ಎಂಬ ಆರೋಪ ಕೇಳಬೇಕಾಗುತ್ತಿತ್ತು. ದಾಳಿಕೋರರ ಗುಂಪನ್ನು ದೇಗುಲದ ಬಳಿ ಬರಲೂ ನಾವು ಬಿಡಲಿಲ್ಲ. ಅವರೆಲ್ಲ ಹೊರಗಿನಿಂದ ಬಂದವರು’ ಎಂಬ ಅಹ್ಮದ್ ಹೇಳಿಕೆಯನ್ನೂ ಎಎನ್‌ಐ ಉಲ್ಲೇಖಿಸಿದೆ.

‘ಗಲಭೆಪೀಡಿತ ಪ್ರದೇಶಗಳ ಜನರಿಗೆ ಕೆಲವು ಸ್ವಯಂಸೇವಾ ಸಂಸ್ಥೆಗಳು ಸಹಾಯ ಮಾಡಿದ್ದರೂ ಸರ್ಕಾರದಿಂದ ಯಾವ ರೀತಿಯ ಬೆಂಬಲವೂ ದೊರೆತಿಲ್ಲ’ ಎಂದೂ ಅವರು ದೂರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾಕಾರರು ಮತ್ತು ಕಾಯ್ದೆ ಬೆಂಬಲಿಗರ ಮಧ್ಯೆ ಆರಂಭವಾದ ಗಲಭೆ ಬಳಿಕ ತೀವ್ರಗೊಂಡಿತ್ತು. ಈವರೆಗೆ ಹಿಂಸಾಚಾರದಲ್ಲಿ 42 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಹತ್ತಾರು ಮನೆಗಳು, ಅಂಗಡಿಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT