ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಗ್ಯಾಂಗ್‌ ರೇಪ್ ಆರೋಪಿಗಳ ಎನ್‌ಕೌಂಟರ್ ಉದ್ದೇಶಪೂರ್ವಕ: ಸುಪ್ರೀಂ ಆಯೋಗ

Last Updated 20 ಮೇ 2022, 11:00 IST
ಅಕ್ಷರ ಗಾತ್ರ

ನವದೆಹಲಿ: ಹೈದರಾಬಾದ್‌ನಲ್ಲಿ 2019ರಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದೇಹವನ್ನು ಸುಟ್ಟುಹಾಕಿದ್ದ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ಉದ್ದೇಶಪೂರ್ವಕ ಎಂದು ಸುಪ್ರೀಂ ಕೋರ್ಟ್ ರಚಿಸಿದ್ದ ಆಯೋಗ ಶುಕ್ರವಾರ ಹೇಳಿದೆ.

ನಾಲ್ವರು ಆರೋಪಿಗಳನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ‍ಪೊಲೀಸರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 10 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಬಹುದು ಎಂದು ಆಯೋಗ ಶಿಫಾರಸು ಮಾಡಿದೆ.

ಆಯೋಗದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಬೇಕು ಎಂಬ ವಕೀಲರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ. ಅಲ್ಲದೆ, ‘ಇದು ಎನ್‌ಕೌಂಟರ್‌ಗೆ ಸಂಬಂಧಿಸಿದ ಪ್ರಕರಣ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆಯೋಗವು ಯಾರನ್ನೋ ತಪ್ಪಿತಸ್ಥರೆಂದು ಗುರುತಿಸಿದೆ. ನಾವೀಗ ಪ್ರಕರಣವನ್ನು ಹೈಕೋರ್ಟ್‌ಗೆ ಕಳುಹಿಸಲಿದ್ದೇವೆ’ ಎಂದು ಹೇಳಿತು.

ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣ

2019ರ ನವೆಂಬರ್‌ನಲ್ಲಿ ಹೈದರಾಬಾದ್‌ನ ಶಂಶಾದ್‌ಬಾದ್‌ನ ಟೋಲ್‌ ಪ್ಲಾಜಾ ಬಳಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಅಪರಾಧ ಕೃತ್ಯದ ಮರುಸೃಷ್ಟಿ ಮಾಡಲು ಘಟನಾ ಸ್ಥಳಕ್ಕೆ ಆರೋಪಿಗಳನ್ನು ಪೊಲೀಸರು ಕರೆದೊಯ್ದ ವೇಳೆ, 2019ರ ಡಿಸೆಂಬರ್ 6ರಂದು ಎನ್‌ಕೌಂಟರ್ ನಡೆದಿತ್ತು. ಪಶುವೈದ್ಯೆಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದ್ದ ಹೈದರಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಗಳು ಹತರಾಗಿದ್ದಾರೆ ಎಂದು ತೆಲಂಗಾಣ ಪೊಲೀಸರು ಪ್ರತಿಪಾದಿಸಿದ್ದರು.

ಎನ್‌ಕೌಂಟರ್‌ ಬಗ್ಗೆ ದೇಶದಾದ್ಯಂತ ಪರ–ವಿರೋಧ ಚರ್ಚೆ ನಡೆದಿತ್ತು. ಬಳಿಕ ಘಟನೆಯ ವಿಚಾರಣೆ ನಡೆಸಲು ಮೂವರು ಸದಸ್ಯರು ತನಿಖಾ ಆಯೋಗವನ್ನು ಸುಪ್ರೀಂ ಕೋರ್ಟ್ ರಚಿಸಿತ್ತು.

ಸಂಬಂಧಿತ ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT