ತಿರುವನಂತಪುರ: ನಿಪಾ ಸೋಂಕಿನ ಪ್ರಕರಣಗಳು ಪತ್ತೆಯಾದ ಸಂದರ್ಭದಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಸಮಯೋಚಿತ ಕಾರ್ಯಾಚರಣೆ ಮತ್ತು ಪರಿಣಾಮಕಾರಿ ಚಿಕಿತ್ಸೆಯು ಮರಣ ಪ್ರಮಾಣವನ್ನು ಶೇ 33ಕ್ಕೆ ಇಳಿಸಲು ನೆರವಾಯಿತು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
‘ಕೇರಳದಲ್ಲಿ ಹರಡಿರುವ ನಿಪಾ ವೈರಸ್ ಬಾಂಗ್ಲಾದೇಶದ ತಳಿಯಾಗಿದ್ದು, ಇದರಲ್ಲಿ ಮರಣ ಸಂಖ್ಯೆ ಹೆಚ್ಚಾಗಿರುತ್ತದೆ’ ಎಂದು ಅವರು ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
‘ಕೋಯಿಕ್ಕೋಡ್‌ನಲ್ಲಿ ಒಟ್ಟು ಆರು ಮಂದಿ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶೀಘ್ರ ರೋಗಪತ್ತೆ ಮತ್ತು ಆ್ಯಂಟಿ ವೈರಲ್ ಔಷಧಗಳ ಬಳಕೆಯು ಮರಣ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ’ ಎಂದಿದ್ದಾರೆ.
‘ರೋಗ ಮೊದಲು ತಗುಲಿದ ವ್ಯಕ್ತಿಯನ್ನು ಹೊರತುಪಡಿಸಿ, ಇತರ ಸೋಂಕಿತರಿಂದ ಹರಡಿಲ್ಲ. ಆರೋಗ್ಯ ಇಲಾಖೆಯ ಅವಿರತ ಶ್ರಮದಿಂದ ಇದು ಸಾಧ್ಯವಾಗಿದೆ’ ಎಂದು ಸಚಿವೆ ಹೇಳಿದ್ದಾರೆ.
‘ನಾಲ್ವರು ಸೋಂಕಿತರು ಚೇತರಿಸಿಕೊಳ್ಳುತ್ತಿದ್ದು, ಅವರೊಂದಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದೇನೆ’ ಎಂದಿದ್ದಾರೆ.