ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ವಲಸೆ ಜಾಲ: ಗುಜರಾತ್, ದೆಹಲಿ, ಮಹಾರಾಷ್ಟ್ರದಲ್ಲಿ ಇ.ಡಿ ದಾಳಿ

Published 5 ಮಾರ್ಚ್ 2024, 13:35 IST
Last Updated 5 ಮಾರ್ಚ್ 2024, 13:35 IST
ಅಕ್ಷರ ಗಾತ್ರ

ನವದೆಹಲಿ: ಮುಖ್ಯವಾಗಿ ಅಮೆರಿಕ, ಕೆನಡಾ ಸೇರಿ ವಿವಿಧ ದೇಶಗಳಿಗೆ ಭಾರತೀಯರನ್ನು ಅಕ್ರಮವಾಗಿ ಕಳುಹಿಸುತ್ತಿದ್ದ ಅಕ್ರಮ ವಲಸೆ ಜಾಲವನ್ನು ನಡೆಸುತ್ತಿರುವ ಏಜೆಂಟ್‌ಗಳು, ಕನ್ಸಲ್ಟೆಂಟ್ಸ್ ಮತ್ತು ಅವರ ಸಂಬಂಧಿತ ಜನರ ಮೇಲೆ ಗುಜರಾತ್, ದೆಹಲಿ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ದಾಳಿ ಮಾಡಿರುವುದಾಗಿ ಮಂಗಳವಾರ ಜಾರಿ ನಿರ್ದೇಶನಾಲಯ(ಇ.ಡಿ) ಹೇಳಿದೆ.

ಮಾರ್ಚ್ 1ರಿಂದಲೇ ಈ ಸಂಬಂಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ರಾಜ್ಯಗಳ 29 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ರೀತಿಯ ಸಂಸ್ಥೆಗಳ ಮೇಲೆ ಜನವರಿ ಮತ್ತು ಫೆಬ್ರುವರಿಯಲ್ಲೂ ದಾಳಿ ನಡೆಸಲಾಗಿತ್ತು ಎಂದು ಅದು ತಿಳಿಸಿದೆ.

ಭರತ್‌ ಭಾಯ್ ಅಲಿಯಾಸ್ ಬಾಬಿ ಪಟೇಲ್, ರಾಮ್‌ಭಾಯ್ ಪ್ರಜಾಪತಿ, ಭವೇಶ್ ಅಶೋಕ್‌ಭಾಯ್ ಪಟೇಲ್ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಗುಜರಾತ್ ಪೊಲೀಸರು ದಾಖಲಿಸಿರುವ ಮೂರು ಎಫ್‌ಐಆರ್‌ಗಳ ಮೇಲೆ ಇ.ಡಿ ಪ್ರಕರಣ ಆಧಾರಿತವಾಗಿದೆ.

ಆರೋಪಿಗಳು ನಕಲಿ ದಾಖಲೆಗಳನ್ನು ಬಳಸಿಕೊಂಡು 2015ರಿಂದಲೂ ಅಕ್ರಮವಾಗಿ ಜನರನ್ನು ವಿದೇಶಗಳಿಗೆ ಕಳುಹಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿಯೊಬ್ಬರಿಂದ ₹60 ರಿಂದ ₹75 ಲಕ್ಷ ವಸೂಲಿ ಮಾಡುತ್ತಿದ್ದಾರೆ. ದಂಪತಿಯಿಂದ ₹1 ಕೋಟಿಯಿಂದ ₹1.25 ಕೋಟಿ ಹಾಗೂ ಅವರ ಜೊತೆ ಮಗು ಇದ್ದರೆ ₹1.25 ಕೋಟಿಯಿಂದ ₹1.75 ಕೋಟಿವರೆಗೆ ವಸೂಲಿ ಮಾಡುತ್ತಿದ್ದಾರೆ ಎಂದು ಇ.ಡಿ ತಿಳಿಸಿದೆ.

ಇದಕ್ಕಾಗಿ ನಕಲಿ ವೀಸಾ, ನಕಲಿ ವಿದ್ಯಾರ್ಥಿ ವೀಸಾ ಬಳಸುತ್ತಿದ್ದರು. ಅದಕ್ಕಾಗಿ, ಅವರು ದುಬಾರಿ ಹಣ ಪಡೆಯುತ್ತಿದ್ದರು. ವಿದ್ಯಾರ್ಥಿ ವೀಸಾ ಪಡೆದು ಹೋದ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ದಾಖಲಾಗದೇ ಇರುವುದು ಕಂಡುಬಂದಿದೆ. ಈ ದಂಧೆಯಲ್ಲಿ ವಿದೇಶಿ ಶಿಕ್ಷಣ ಸಂಸ್ಥೆಗಳ ಕೈವಾಡವೂ ಇರುವ ಶಂಕೆ ವ್ಯಕ್ತವಾಗಿದೆ.

2022ರ ಗಿಂಗುಚಾ ಪ್ರಕರಣದಲ್ಲಿ ಭರತ್ ಭಾಯ್ ಪಟೇಲ್ ಎಂಬವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಅಕ್ರಮವಾಗಿ ಕೆನಡಾಗೆ ತೆರಳಿದ್ದ ನಾಲ್ವರು ಭಾರತೀಯರು ಅಮೆರಿಕ ಪ್ರವೇಶಿಸುವಾಗ ಮಾರಣಾಂತಿಕ ಮೈನಸ್ ಡಿಗ್ರಿ ಉಷ್ಣಾಂಶದಲ್ಲಿ ಸಿಲುಕಿ ಮೃತಪಟ್ಟ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT