ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ‘ಕಾನೂನುಬದ್ಧ ಲಂಚ’ ಎಂದು ಆರೋಪಿಸಿದ ಚಿದಂಬರಂ

Published 30 ಸೆಪ್ಟೆಂಬರ್ 2023, 5:50 IST
Last Updated 30 ಸೆಪ್ಟೆಂಬರ್ 2023, 5:51 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ ಎಂಬುದು ‘ಕಾನೂಬು ಬದ್ಧ ಲಂಚ‘ ಎಂದು ಆರೋಪಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ, ಅ. 4ರಂದು ಇದು ಮತ್ತೆ ತೆರೆಯಲಿದ್ದು ಬಿಜೆಪಿಗೆ ಚಿನ್ನದ ಫಸಲನ್ನೇ ನೀಡಲಿದೆ ಎಂದಿದ್ದಾರೆ.

ಚುನಾವಣಾ ಬಾಂಡ್‌ನ 28ನೇ ಕಂತಿಗೆ ಸರ್ಕಾರವು ಶುಕ್ರವಾರ ಅನುಮೋದನೆ ನೀಡಿದೆ. ಅ. 4ರಿಂದ 10 ದಿನಗಳ ಕಾಲ ಈ ಬಾಂಡ್‌ಗಳು ಖರೀದಿಗೆ ಲಭ್ಯವಿರಲಿವೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮೀಝೋರಾಂ ಪಂಚರಾಜ್ಯ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರದಿಂದ ಈ ಘೋಷಣೆಯಾಗಿದೆ. ಈ ರಾಜ್ಯಗಳಿಗೆ ಶೀಘ್ರದಲ್ಲಿ ಚುನಾವಣೆ ಘೋಷಣೆಯಾಗಲಿದೆ.

ಚಿದಂಬರಂ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ‘ಅ. 4ರಿಂದ ಮಾರಾಟವಾಗಲಿರುವ ಚುನಾವಣಾ ಬಾಂಡ್‌ಗಳಲ್ಲಿ ಈ ಹಿಂದಿನಂತೆಯೇ ಬಿಜೆಪಿಗೆ ಶೇ 90ರಷ್ಟು ದೇಣಿಗೆ ಸಲ್ಲಿಕೆಯಾಗಲಿವೆ. ಹೀಗಾಗಿ ಬಿಜೆಪಿಗೆ ಇದು ಚಿನ್ನದ ಫಸಲನ್ನೇ ನೀಡಲಿದೆ’ ಎಂದಿದ್ದಾರೆ.

‘ಕ್ರೋನಿ ಬಂಡವಾಳಶಾಹಿಗಳು ದೆಹಲಿಯಲ್ಲಿ ಕುಳಿತಿರುವ ತಮ್ಮ ಪ್ರಭು ಹಾಗೂ ಮಾಸ್ಟರ್‌ಗಳಿಗೆ ಕಾಣಿಕೆ ನೀಡಲು ಚೆಕ್‌ ಪುಸ್ತಕಗಳನ್ನು ತೆರೆದಿಟ್ಟುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ರಾಜಕೀಯ ದೇಣಿಗೆ ನೀಡುವ ಹಂತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಗದು ನೀಡಲು ಪರ್ಯಾಯವಾಗಿ ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತರಲಾಗಿದೆ. 2018ರಲ್ಲಿ ಮೊದಲ ಬಾರಿಗೆ ಚುನಾವಣಾ ಬಾಂಡ್‌ಗಳು ಪರಿಚಯಿಸಲಾಯಿತು. ಇದನ್ನು ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ ಮಾತ್ರ ಕೇಂದ್ರ ಅನುಮತಿ ನೀಡಿದೆ. ಈ ಚುನಾವಣಾ ಬಾಂಡ್‌ಗಳನ್ನು ಭಾರತೀಯ ಪ್ರಜೆಗಳು, ಸಂಘ ಹಾಗೂ ಸಂಸ್ಥೆಗಳು ಖರೀದಿಸಲು ಅವಕಾಶವಿದೆ. 

ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಶೇ 1ಕ್ಕಿಂತ ಹೆಚ್ಚು ಮತ ಪಡೆದ ಯಾವುದೇ ನೋಂದಾಯಿತ ಪಕ್ಷವು ಈ ಚುನಾವಣಾ ಬಾಂಡ್‌ ಪಡೆಯಲು ಅರ್ಹತೆ ಹೊಂದಿರುತ್ತವೆ. 

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೈಶಾಚಿಕ ಕೃತ್ಯಗಳಲ್ಲಿ ಚುನಾವಣಾ ಬಾಂಡ್‌ ಸ್ಕೀಮ್‌ ಕೂಡಾ ಒಂದು. ಇದು ದೇಶದ ಪ್ರಜಾಪ್ರಭುತ್ವ ಹಾಗೂ ಚುನಾವಣಾ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT