ಕೋಲ್ಕತ್ತ: ಒಡಿಶಾದ ಬಾಲೆಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೂರೂ ರೈಲಿನ ಲೋಕೊ ಪೈಲಟ್‌ಗಳು, ಗಾರ್ಡ್‌ಗಳು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ತನ್ನ ನಿಗದಿತ ಹಳಿಯಲ್ಲಿ ಹೋಗದೇ ಲೂಪ್ ಲೈನ್‌ನಲ್ಲಿ ಗಂಟೆಗೆ 128 ಕಿ.ಮೀ. ವೇಗದಲ್ಲಿ ಹೋದ ಶಾಲಿಮಾರ್–ಕೋರಮಂಡಲ್ ರೈಲು ಅದೇ ಹಳಿಯಲ್ಲಿ ಅದಾಗಲೇ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಲ್ಲಿದ್ದ ಒಬ್ಬ ಲೋಕೊಪೈಲಟ್, ಸಹ ಲೋಕೊಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರ ಪರಿಸ್ಥಿತಿ ಏನೂ ಹೇಳುವಂತಿಲ್ಲ ಎಂದು ಆಗ್ನೇಯ ರೈಲ್ವೆದ ಖರಗ್‌ಪುರ್ ವಲಯದ ಮ್ಯಾನೇಜರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಗೂಡ್ಸ್ ರೈಲಿನಲ್ಲಿದ್ದ ಎಂಜಿನ್ ಡ್ರೈವರ್ ಹಾಗೂ ಗಾರ್ಡ್ ಅಷ್ಟೊಂದು ಗಂಭೀರವಲ್ಲದೇ ಗಾಯಗೊಂಡಿದ್ದು ಅವರನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜೇಶ್ ಕುಮಾರ್ ತಿಳಿಸಿದ್ದಾರೆ.