ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 23ರವರೆಗೆ ಇ.ಡಿ ಕಸ್ಟಡಿಗೆ ಕೆಸಿಆರ್ ಪುತ್ರಿ ಕೆ. ಕವಿತಾ

ಅಬಕಾರಿ ಹಗರಣ: ತನ್ನ ಬಂಧನ ಅಕ್ರಮ ಎಂದ ಕೆಸಿಆರ್ ಪುತ್ರಿ
Published 16 ಮಾರ್ಚ್ 2024, 16:07 IST
Last Updated 16 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೆ.ಕವಿತಾ ಅವರನ್ನು ದೆಹಲಿ ನ್ಯಾಯಾಲಯವು ಮಾರ್ಚ್ 23ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ಒಪ್ಪಿಸಿ ಶನಿವಾರ ಆದೇಶ ಹೊರಡಿಸಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗಾಗಿ ಕವಿತಾ ಅವರನ್ನು 10 ದಿನಗಳ ಕಾಲ ತನ್ನ ಕಸ್ಟಡಿಗೆ ಒಪ್ಪಿಸಬೇಕೆಂದು ಇ.ಡಿ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಇ.ಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್‌ಪಾಲ್ ಅವರು ಈ ಆದೇಶ ನೀಡಿದರು.

ಅದಕ್ಕೂ ಮುನ್ನ, ಬಿಆರ್‌ಎಸ್ ನಾಯಕಿ ಹಾಗೂ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಇ.ಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. 

ತೆಲಂಗಾಣದ ವಿಧಾನ ಪರಿಷತ್ ಸದಸ್ಯರೂ ಆಗಿರುವ ಕವಿತಾ ಅವರು, ತಮ್ಮ ಬಂಧನ ಅಕ್ರಮವಾಗಿದ್ದು, ತಾವು ನ್ಯಾಯಾಲಯದಲ್ಲಿ ಈ ಕುರಿತು ಹೋರಾಡುವುದಾಗಿ ಹೇಳಿದರು. 

ಕವಿತಾ ಅವರ ಪರವಾಗಿ ವಕೀಲರಾದ ವಿಕ್ರಮ್ ಚೌಧರಿ ಮತ್ತು ನಿತೇಶ್ ರಾಣಾ ವಾದ ಮಂಡಿಸಿದರು. ‘ಮಾರ್ಚ್ 10ರಂದು ಕವಿತಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದ್ದು, ಅದರ ಒಳಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿರುವುದರಿಂದ ಇದು ಕರಾಳ ದಿನವಾಗಿದೆ’ ಎಂದು ಕವಿತಾ ಪರ ವಕೀಲರು ವಾದಿಸಿದರು.

ಆದರೆ, ಕವಿತಾ ಅವರ ಬಂಧನದ ಕ್ರಮವನ್ನು ಇ.ಡಿ ಸಮರ್ಥಿಸಿಕೊಂಡಿತು. ‘ಕವಿತಾ ಅವರ ವಿರುದ್ಧ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ತಾನು ಸುಪ್ರೀಂ ಕೋರ್ಟ್ ಮುಂದೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಅವರ ವಿರುದ್ಧ ಸಾಕಷ್ಟು ಪುರಾವೆ, ಸಾಕ್ಷಿಗಳ ಹೇಳಿಕೆಗಳು ಇವೆ. ಕವಿತಾ ಅವರು ಸಾಕ್ಷ್ಯನಾಶದಲ್ಲಿ ತೊಡಗಿದ್ದರು’ ಎಂದು ಇ.ಡಿ ವಾದಿಸಿತು. ಪ್ರಕರಣದ ವಿಚಾರಣೆಯ ನಂತರ ಕೋರ್ಟ್ ಆದೇಶವನ್ನು ಕಾಯ್ದಿರಿಸಿತು.

ಅಬಕಾರಿ ಹಗರಣದ ಸಂಬಂಧ ಕೆಸಿಆರ್ ಕುಟುಂಬ ಮತ್ತು ಬಿಜೆಪಿ ಟಿವಿ ಧಾರಾವಾಹಿಗಳಂತೆ ನಾಟಕವಾಡುತ್ತಿದ್ದು ಅದು ಈಗ ಕ್ಲೈಮ್ಯಾಕ್ಸ್ ಮುಟ್ಟಿದೆ. ಎರಡೂ ಪಕ್ಷಗಳು ರಾಜಕೀಯ ತಂತ್ರಗಾರಿಕೆ ಮಾಡುತ್ತಿವೆ.

-ಎ.ರೇವಂತ್ ರೆಡ್ಡಿ ತೆಲಂಗಾಣ ಮುಖ್ಯಮಂತ್ರಿ

ಯಾವ ಭ್ರಷ್ಟರನ್ನೂ ಬಿಡುವುದಿಲ್ಲ: ಮೋದಿ

ಅತ್ಯಂತ ಭ್ರಷ್ಟ ಪಕ್ಷಗಳ ಜತೆ ಬಿಆರ್‌ಎಸ್ ಅವ್ಯವಹಾರದಲ್ಲಿ ಪಾಲುದಾರಿಕೆ ಹೊಂದಿದ್ದು ಯಾವ ಭ್ರಷ್ಟರನ್ನೂ ತಾವು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದರು.  ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಬಂಧನದ ಮರುದಿನ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ.     ನಾಗರಕರ್ನೂಲ್‌ನಲ್ಲಿ ಬಿಜೆಪಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಅನ್ನು ಭ್ರಷ್ಟ ಪಕ್ಷಗಳು ಎಂದು ಟೀಕಿಸಿದರು. ವಂಶಾಡಳಿತದ ಪಕ್ಷಗಳಲ್ಲಿ ಭ್ರಷ್ಟಾಚಾರದ ಪಾಲುದಾರಿಕೆ ಬಲಿಷ್ಠವಾಗಿರುತ್ತದೆ ಎಂದೂ ಅವರು ಆರೋಪಿಸಿದರು.

ಬಂಧನ ಖಂಡಿಸಿ ಪ್ರತಿಭಟನೆ

ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಬಂಧನ ಖಂಡಿಸಿ ಪಕ್ಷದ ಕಾರ್ಯಕರ್ತರು ತೆಲಂಗಾಣದ ಹಲವೆಡೆ ಪ್ರತಿಭಟನೆ ನಡೆಸಿದರು.  ಕವಿತಾ ಬಂಧನ ಅಕ್ರಮ ಎಂದು ಕರೆದ ಪ್ರತಿಭಟನಾಕಾರರು ಕೊರಳಿಗೆ ಕಪ್ಪು ಪಟ್ಟಿ ಧರಿಸಿ ಕಪ್ಪು ಬಾವುಟ ಪ್ರದರ್ಶಿಸಿದರು. ಹಲವು ಸ್ಥಳಗಳಲ್ಲಿ ರ್‍ಯಾಲಿ ನಡೆಸಿದರು. ಪ್ರಧಾನಿ ಮೋದಿ ಅವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ಕೆಲವೆಡೆ ಅವರ ಪ್ರತಿಕೃತಿ ದಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT