ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾವು ದೃಢವಾಗಿ ಇಂಡಿಯಾ ಬಣದ ಜೊತೆಗಿದ್ದೇವೆ: ಬಿಹಾರ ಜೆಡಿಯು ಅಧ್ಯಕ್ಷ ಉಮೇಶ್ ಸಿಂಗ್

Published 26 ಜನವರಿ 2024, 12:35 IST
Last Updated 26 ಜನವರಿ 2024, 12:35 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ದೃಢವಾಗಿ ಇಂಡಿಯಾ ಬಣದ ಜೊತೆಗಿದೆ. ಮಿತ್ರ ಪಕ್ಷಗಳು ಮತ್ತು ಅವುಗಳ ಜೊತೆಗಿನ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಪಕ್ಷ ಬಯಸುತ್ತದೆ ಎಂದು ಜೆಡಿಯು ತಿಳಿಸಿದೆ.

ಜೆಡಿಯು ಪಕ್ಷವು ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಬಣಕ್ಕೆ ಮರಳಲು ಯತ್ನಿಸುತ್ತಿದೆ ಎಂಬ ವದಂತಿಗಳನ್ನು ಅಲ್ಲಗಳೆದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉಮೇಶ್ ಸಿಂಗ್ ಕುಶವಾಹ, ಬಿಹಾರದ ಆಡಳಿತಾರೂಢ ಮಹಾಘಟಬಂಧನ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ. ಕೆಲವು ಅಜೆಂಡಾಗಳನ್ನು ಇಟ್ಟುಕೊಂಡು ಮಾಧ್ಯಮಗಳಲ್ಲಿ ವದಂತಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದರು.

‘ನಾನು ನಿನ್ನೆ ಮತ್ತು ಇಂದು ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಅಲ್ಲಿ ಪಕ್ಷ ಎನ್‌ಡಿಎ ಬಣಕ್ಕೆ ಸೇರುವ ಚರ್ಚೆ ನಡೆದಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಯಲ್ಲಿ ಯಾವುದೇ ಸತ್ಯವಿಲ್ಲ. ಪಕ್ಷದ ಶಾಸಕರನ್ನು ಪಾಟ್ನಾಗೆ ಬರಲು ಸೂಚಿಸಲಾಗಿದೆ ಎಂಬುದೂ ವದಂತಿಯೇ’ ಎಂದೂ ಅವರು ಹೇಳಿದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಜೊತೆ ಬಹಳ ಹೊತ್ತು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾವು ದೃಢವಾಗಿ ಇಂಡಿಯಾ ಬಣದಲ್ಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

‘ನಮ್ಮ ಮೈತ್ರಿಕೂಟದ ಪಕ್ಷಗಳಲ್ಲೊಂದಾಗಿರುವ ಕಾಂಗ್ರೆಸ್, ಬಣದ ಇತರೆ ಪಕ್ಷಗಳು ಮತ್ತು ಸೀಟು ಹಂಚಿಕೆ ಬಗ್ಗೆ ಆತ್ಮಾವಲೋಕನ ನಡೆಸಬೇಕು. ನಮ್ಮ ನಾಯಕರಾದ ನಿತೀಶ್ ಕುಮಾರ್ ಅವರು ಸೀಟು ಹಂಚಿಕೆ ಪ್ರಕ್ರಿಯೆ ಆದಷ್ಟು ಬೇಗ ಮುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆ ಬಳಿಕ ನಾವು ಲೋಕಸಭಾ ಚುನಾವಣೆ ತಯಾರಿ ಮಾಡಿಕೊಳ್ಳಬಹುದು’ ಎಂದು ಕುಶವಾಹ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಎಎಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷಗಳು ಇಂಡಿಯಾ ಜೊತೆಗಿನ ಮೈತ್ರಿ ಕಡಿದುಕೊಳ್ಳುವ ಕುರಿತಂತೆ ಉಭಯ ಪಕ್ಷಗಳ ನಾಯಕರ ಹೇಳಿಕೆ ಬೆನ್ನಲ್ಲೇ ಜೆಡಿಯು ನಾಯಕನ ಹೇಳಿಕೆ ಹೊರಬಿದ್ದಿದೆ.

ಎರಡು ವರ್ಷಗಳಿಂದ ಎನ್‌ಡಿಎಗೆ ತಮ್ಮ ಪಕ್ಷವು ಮರಳುವ ಬಗ್ಗೆ ವದಂತಿಗಳು ಹರಡುತ್ತಿವೆ. ‘ಇವು ಕೆಲವು ಅಜೆಂಡಾ ಹೊಂದಿರುವ ಜನರು ಹಬ್ಬಿಸುತ್ತಿರುವ ಸುದ್ದಿಗಳು’ ಎಂದು ಜೆಡಿಯು ನಾಯಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT