ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಯನಾಡ್‌ ಭೂಕುಸಿತ: ಮೌಲ್ಯಮಾಪನ ನಡೆಸಲಿದೆ ತಜ್ಞರ ತಂಡ 

Published 13 ಆಗಸ್ಟ್ 2024, 14:23 IST
Last Updated 13 ಆಗಸ್ಟ್ 2024, 14:23 IST
ಅಕ್ಷರ ಗಾತ್ರ

ವಯನಾಡ್‌ (ಕೇರಳ): ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಿಗೆ ಐವರು ತಜ್ಞರ ತಂಡ ಮಂಗಳವಾರ ಭೇಟಿ ನೀಡಿದ್ದು, 200ಕ್ಕೂ ಹೆಚ್ಚು ಜನರ ಜೀವಹಾನಿಯಾದ ಈ ದುರಂತಕ್ಕೆ ನಿಜವಾದ ಕಾರಣ ಏನೆಂಬುದನ್ನು ನಿರ್ಣಯಿಸಲಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಯೋಜಿಸಿರುವ ರಾಷ್ಟ್ರೀಯ ಭೂ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಜಾನ್ ಮಥಾಯ್ ಅವರ ನೇತೃತ್ವದ ತಂಡವು ವಯನಾಡ್‌ನ ಮೇಪ್ಪಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಕುಸಿತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲಿದೆ. ಈ ತಂಡವು 2005ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ತಂಡವು ವಿಪತ್ತು ಪ್ರದೇಶದ ವಿವಿಧ ಭಾಗಗಳಲ್ಲಿ ಮತ್ತು ಹತ್ತಿರದ ಸ್ಥಳಗಳಲ್ಲಿ ಸಂಭವನೀಯ ಅಪಾಯಗಳನ್ನು ನಿರ್ಣಯಿಸಲಿದೆ. ವಿಪತ್ತು ಹೇಗೆ ಸಂಭವಿಸಿತು ಮತ್ತು ಭೂಕುಸಿತದಲ್ಲಿ ಯಾವೆಲ್ಲ ವಿದ್ಯಮಾನಗಳು ಸಂಭವಿಸಿದವು ಎಂಬುದನ್ನು ಸಹ ಇದು ಮೌಲ್ಯಮಾಪನ ಮಾಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪರಿಶೀಲನೆಯ ನಂತರ, ತಜ್ಞರ ತಂಡವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಅಲ್ಲದೆ, ಈ ಪ್ರದೇಶಕ್ಕೆ ಸಂಬಂದಿಸಿದಂತೆ ಭೂ ಬಳಕೆಯ ಕುರಿತು ಸೂಕ್ತ ಶಿಫಾರಸು ಕೂಡ ಮಾಡಲಿದೆ. 

ತಜ್ಞರ ತಂಡದಲ್ಲಿ ಸದಸ್ಯರಾಗಿ ಜಲಸಂಬಂಧಿತ ವಿಪತ್ತು ನಿರ್ವಹಣೆಯ ಶ್ರೇಷ್ಠತಾ ಕೇಂದ್ರದ (ಸಿಡಬ್ಲ್ಯುಆರ್‌ಎಂಸಿ) ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥೆ ಡಾ.ಟಿ.ಕೆ.ದೃಶ್ಯಾ, ಸುರತ್ಕಲ್‌ನ ಎನ್‌ಐಟಿಕೆ ಸಹ ಪ್ರಾಧ್ಯಾಪಕ ಡಾ.ಶ್ರೀವಲ್ಸಾ ಕೊಳತಯಾರ್, ಜಿಲ್ಲಾ ಮಣ್ಣು ಸಂರಕ್ಷಣಾ ಅಧಿಕಾರಿ ತಾರಾ ಮನೋಹರನ್ ಮತ್ತು ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಅಪಾಯ ವಿಶ್ಲೇಷಕ ಪಿ.ಪ್ರದೀಪ್ ಅವರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT