ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತುಸ್ಸೆರಿಯ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ₹4.5 ಕೋಟಿ ದರೋಡೆ

Published 30 ಜುಲೈ 2023, 14:51 IST
Last Updated 30 ಜುಲೈ 2023, 14:51 IST
ಅಕ್ಷರ ಗಾತ್ರ

ಪಾಲಕ್ಕಾಡ್‌ (ಕೇರಳ): ಇಲ್ಲಿಗೆ ಸಮೀಪದ ಪುತುಸ್ಸೆರಿಯ ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಮಲಪ್ಪುರಂ ಕಡೆಗೆ ಹೋಗುತ್ತಿದ್ದ ಕಾರನ್ನು ಸಿನೀಮಿಯ ರೀತಿ ಅಡ್ಡಗಟ್ಟಿದ ದರೋಡೆಕೋರರ ಗುಂಪೊಂದು, ಕಾರಿನಲ್ಲಿದ್ದವರ ಮೇಲೆ ದಾಳಿ ನಡೆಸಿ, ಅವರ ಬಳಿ ಇದ್ದ ₹ 4.5 ಕೋಟಿ ನಗದು ‌ದೋಚಿಕೊಂಡು ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 15 ಮಂದಿ ದರೋಡೆಕೋರರ ತಂಡವು ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಕ್‌ವೊಂದನ್ನು ಆಯಕಟ್ಟಿನ ಸ್ಥಳದಲ್ಲಿ ನಿಲ್ಲಿಸಿ, ಕಾರನ್ನು ಅಡ್ಡಗಟ್ಟಿದೆ. ಕಾರಿನಲ್ಲಿದ್ದವರ ಮೇಲೆ ದಾಳಿ ನಡೆಸಿ, ಹಣ ಕಸಿದು ಪರಾರಿಯಾಗಿದ್ದಾರೆ. ದಾಳಿಗೊಳಗಾದ, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಶನಿವಾರ ರಾತ್ರಿ ಪಾಲಕ್ಕಾಡ್ ಜಿಲ್ಲೆಯ ಕಸಬಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಹಲವು ಕಾರುಗಳಲ್ಲಿ ಬಂದಿರುವ ದರೋಡೆಕೋರರ ತಂಡವು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರ ಮೇಲೆ ದಾಳಿ ಮಾಡಿ, ಅವರ ಬಳಿ ಇದ್ದ ನಗದು ಲೂಟಿ ಮಾಡಿದೆ. ಅಲ್ಲದೆ, ಅವರನ್ನು ತಮ್ಮ ವಾಹನದಲ್ಲಿ ಕರೆದೊಯ್ದು ತ್ರಿಶೂರ್ ಬಳಿ ವಾಹನದಿಂದ ಕೆಳಕ್ಕೆ ಎಸೆದು ಹೋಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಟೋಲ್ ಬೂತ್‌ಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗಿದೆ. ಆದರೆ, ದಾಳಿಕೋರರು ತಮ್ಮ ಕಾರುಗಳಿಗೆ ನಕಲಿ ಸಂಖ್ಯೆಯ ನೋಂದಣಿ ಫಲಕಗಳನ್ನು ಬಳಸಿರುವುದು ಕಂಡುಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಬೆಂಗಳೂರಿನಿಂದ ಮಲಪ್ಪುರಂಗೆ ತೆರಳುತ್ತಿತ್ತು. ಹಣದ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT