ನವದೆಹಲಿ: 78ನೆಯ ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಪರ್ವತಾರೋಹಿಗಳ ತಂಡವೊಂದು, ರಕ್ಷಣಾ ಸಚಿವಾಲಯದ ನೆರವು ಪಡೆದು, 7,800 ಚದರ ಅಡಿ ಗಾತ್ರದ ತ್ರಿವರ್ಣ ಧ್ವಜವನ್ನು ಆಫ್ರಿಕಾ ಖಂಡದ ಕಿಲಿಮಂಜಾರೊದ ಉಹುರು ಪರ್ವತದ ಶೃಂಗದಲ್ಲಿ ಅನಾವರಣ ಮಾಡಿದೆ.
‘ಕನಸುಗಳನ್ನು ಈಡೇರಿಸಿಕೊಳ್ಳುವುದು ಎಷ್ಟೇ ಸವಾಲಿನದ್ದಾಗಿ ಕಂಡರೂ, ಅವುಗಳನ್ನು ನನಸಾಗಿಸಿಕೊಳ್ಳುವ ಸ್ಫೂರ್ತಿಯನ್ನು ಇದು ಅಂಗವಿಕಲರ ಮುಂದಿನ ತಲೆಮಾರಿನವರಲ್ಲಿ ಮೂಡಿಸುವ ಗುರಿಯನ್ನು ಹೊಂದಿದೆ‘ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ತಂಡವನ್ನು ಗ್ರೂಪ್ ಕ್ಯಾಪ್ಟನ್ ಜೈ ಕಿಷನ್ ಅವರು ಮುನ್ನಡೆಸಿದ್ದರು. ದೇಹದ ಅಂಗವೊಂದನ್ನು ಕಳೆದುಕೊಂಡಿರುವ ವ್ಯಕ್ತಿಯೊಬ್ಬರು ಊರುಗೋಲು ಬಳಸಿಕೊಂಡು ಇದೇ ಮೊದಲ ಬಾರಿಗೆ ಈ ಶೃಂಗವನ್ನು ಏರಿದ್ದಾರೆ ಎಂದು ಕೂಡ ಪ್ರಕಟಣೆಯಲ್ಲಿ ಹೇಳಲಾಗಿದೆ.