ಮುಂಬೈ: 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಅವಳನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಕೊಲ್ಹಾಪುರ ಜಿಲ್ಲೆಯ ಕಾರವೀರ್ ತಾಲೂಕಿನಲ್ಲಿ ನಾಪತ್ತೆ ಪ್ರಕರಣ ದಾಖಲಾದ ನಂತರ ಗುರುವಾರ ಸಂಜೆ ಶೀಯೆ ಎಂಬ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಕಬ್ಬಿನ ಗದ್ದೆ ಕೆಲಸಕ್ಕೆ ಬಿಹಾರದಿಂದ ವಲಸೆ ಬಂದಿದ್ದ ಕುಟುಂಬವೊಂದಕ್ಕೆ ಈ ಬಾಲಕಿ ಸಂಬಂಧಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಆತನೇ ಬಾಲಕಿಯನ್ನು ಪುಸಲಾಯಿಸಿ ಕಬ್ಬಿನ ಗದ್ದೆಗೆ ಕರೆದೋಯ್ದು ಅತ್ಯಾಚಾರ ಮಾಡಿದ್ದ. ಬಳಿಕ ವಿಷಯ ಗೊತ್ತಾಗುತ್ತದೆ ಎಂದು ಬಾಲಕಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡಣವೀಸ್ ಅವರು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬದ್ಲಾಪುರ್‌ದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಹೇಯ ಪ್ರಕರಣ ನಡೆದಿರುವುದು ಆತಂಕ ಮೂಡಿಸಿದೆ.