ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕತಾವಾದಿ ನಾಯಕರ ಭದ್ರತೆಗಾಗಿ ಸರ್ಕಾರ ಖರ್ಚು ಮಾಡಿದ್ದು ₹11 ಕೋಟಿ!

Last Updated 18 ಫೆಬ್ರುವರಿ 2019, 6:33 IST
ಅಕ್ಷರ ಗಾತ್ರ

ಶ್ರೀನಗರ: ಪುಲ್ವಾಮ ಆತ್ಮಾಹುತಿ ದಾಳಿ ನಂತರ ಜಮ್ಮು ಮತ್ತು ಕಾಶ್ಮೀರದ ಐವರು ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಜಮ್ಮು ಕಾಶ್ಮೀರ ಸರ್ಕಾರದ ದಾಖಲೆಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ ಈ ನಾಯಕರ ರಕ್ಷಣೆ, ಬೆಂಗಾವಲು, ಖಾಸಗಿ ಭದ್ರತಾ ಸಿಬ್ಬಂದಿ (ಪಿಎಸ್‍ಒ) ಮೊದಲಾದುವುಗಳಿಗಾಗಿ ಸರ್ಕಾರ ಪ್ರತಿ ವರ್ಷ ₹1 ಕೋಟಿ ಖರ್ಚು ಮಾಡಿದೆ.

ಫೆಬ್ರುವರಿ2, 2018ರಲ್ಲಿ ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರವು ಹುರಿಯತ್ ನಾಯಕರಿಗೆ ಕಳೆದ 10 ವರ್ಷಗಳಲ್ಲಿ ₹11 ಕೋಟಿ ಖರ್ಚು ಮಾಡಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದರು.ಅದೇ ವೇಳೆ ಪ್ರತ್ಯೇಕತಾವಾದಿಗಳ ಭದ್ರತೆಗಾಗಿ ಸರ್ಕಾರ ₹10.88 ಕೋಟಿ ಖರ್ಚು ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಹೇಳಿತ್ತುಎಂದು ಟ್ರಿಬ್ಯೂನ್ ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ.

ಹುರಿಯತ್‌ ಮುಖಂಡರಾದ ಮೀರ್‌ವೈಜ್‌ ಉಮರ್‌ ಫಾರೂಕ್‌, ಪ್ರೊ. ಅಬ್ದುಲ್‌ ಗನಿ ಭಟ್‌, ಬಿಲಾಲ್‌ ಲೋನ್‌, ಜೆಕೆಎಲ್‌ಎಫ್ ನಾಯಕ ಹಾಶಿಮ್‌ ಖುರೇಷಿ ಮತ್ತು ಶಬೀರ್‌ ಶಾ ಅವರಿಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿ ಮತ್ತು ವಾಹನಗಳನ್ನು ಭಾನುವಾರ ಸಂಜೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಈ ಪೈಕಿ ಹಿರಿಯ ನೇತಾರ ಮೀರ್‌ವೈಜ್‌ ಉಮರ್‌ ಫಾರೂಕ್‌‍ಗೆ ಹೆಚ್ಚಿನ ಹಣವನ್ನು ರಾಜ್ಯ ಬೊಕ್ಕಸದಿಂದ ಖರ್ಚು ಮಾಡಲಾಗಿದೆ. ಪೊಲೀಸ್ ಭದ್ರತೆಗೆ ₹1.27 ಕೋಟಿ, ಸುರಕ್ಷೆಗಾಗಿ ₹5.06 ಕೋಟಿ ಸರ್ಕಾರ ಖರ್ಚು ಮಾಡಿತ್ತು.ಶ್ರೀನಗರದ ನಗೀನ್ ಪ್ರದೇಶದಲ್ಲಿರುವ ಮೀರ್‌ವೈಜ್‍ನ ನಿವಾಸಕ್ಕೆ 10 ಪೊಲೀಸರು ಸದಾ ಕಾವಲಿರುತ್ತಿದ್ದರು.ಇಲ್ಲಿ ಪಿಎಸ್‍ಒಗಳನ್ನೂ ನೇಮಕ ಮಾಡಲಾಗಿತ್ತು.
2011ರಿಂದ ಪ್ರೊ. ಅಬ್ದುಲ್ ಗನಿ ಭಟ್‍ಗೆ 6ರಿಂದ 8 ಪೊಲೀಸರು, 4 ಪಿಎಸ್‍ಒ ಕಾವಲಿದ್ದಾರೆ. ಇದಕ್ಕಾಗಿ ಸರ್ಕಾರ ಖರ್ಚು ಮಾಡಿದ್ದು ₹2.34 ಕೋಟಿ, ಮೀರ್‌ವೈಜ್‌ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಎಕ್ಸಿಕ್ಯೂಟಿವ್ ಸದಸ್ಯ ಈ ಭಟ್. ಇನ್ನೊಬ್ಬ ನೇತಾರ ಬಿಲಾಲ್ ಗನಿ ಲೋನ್‍ನ ಭದ್ರತೆಗಾಗಿ ₹1. 65 ಕೋಟಿ ಸರ್ಕಾರ ವ್ಯಯಿಸಿದೆ.ಈತನ ಸಹೋದರ ಸಜ್ಜಾದ್‌ ಲೋನ್‌ ಹಿಂದಿನ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು.

ಪ್ರತ್ಯೇಕತಾವಾದಿ, ಶಿಯಾ ನೇತಾರನಾಗಿರುವ ಅಬ್ಬಾಸ್ ಅನ್ಸಾರಿಗೆ ₹3.09 ಕೋಟಿ, ಶಿಯಾ ಮುಖಂಡ ಸಯ್ಯದ್ ಹಸ್ಸನ್ ₹1.04 ಕೋಟಿ, ಸಲಿ ಗಿಲಾನಿ ₹34.70 ಲಕ್ಷ , ಸಫರ್ ಅಕ್ಬರ್ ಭಟ್ ₹47.95 ಲಕ್ಷ, ಶಹೀದ್ ಉಲ್ ಇಸ್ಲಾಂ ₹81.47ಲಕ್ಷ, ಅಬ್ದುಲ್ ಗನಿ ಶಾ ₹8.74, ಸಯ್ಯದ್ ಅಬ್ದುಲ್ ಹುಸೇನ್ ₹25.21 ಲಕ್ಷ, ಮನ್ಸೂರ್ ಅಬ್ಬಾಸ್ ಅನ್ಸಾರಿ ₹22.10 ಲಕ್ಷ ಸರ್ಕಾರ ಖರ್ಚು ಮಾಡಿದೆ.
ಮೀರ್‌ವೈಜ್‌ನ ಮಾಧ್ಯಮ ವಕ್ತಾರನಾಗಿದ್ದ ಶಾಹೀದ್ ಉಲ್ ಇಸ್ಲಾಮ್‍ನ್ನು 2017 ಜುಲೈ 25ರಂದು ಎನ್ಐಎ ಬಂಧಿಸಿದ್ದ ಕಾರಣ ಆತನಿಗಿದ್ದ ಭದ್ರತೆ ಹಿಂಪಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT