ನವದೆಹಲಿ: ಪ್ರಸ್ತುತ ದೇಶದಲ್ಲಿ ಎಂಪಾಕ್ಸ್‌ನ (ಮಂಕಿಪಾಕ್ಸ್) ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೂ ಈ ಸೋಂಕು ತಡೆಗಟ್ಟಲು ಸರ್ಕಾರವು ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು.
‘ಒಂದು ವೇಳೆ ದೇಶದಲ್ಲಿ ಸೋಂಕು ಕಾಣಿಸಿಕೊಂಡರೂ ಸದ್ಯದ ಮಟ್ಟಿಗೆ ಇದು ತೀವ್ರಗತಿಯಲ್ಲಿ ಪಸರಿಸುವುದಿಲ್ಲ ಎಂಬುದನ್ನು ಪರಿಶೀಲಿಸಿದ್ದೇವೆ. ದೇಶದಲ್ಲಿನ ಸ್ಥಿತಿಗತಿಯ ಬಗ್ಗೆ ಗಮನ ಇರಿಸಿದ್ದೇವೆ’ ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಇದೇ 14ರಂದು ಮತ್ತೊಮ್ಮೆ (2022ರಲ್ಲಿಯೂ ಘೋಷಣೆ) ಘೋಷಿಸಿತ್ತು. ಈ ಹಿನ್ನೆಲೆಯಲ್ಲಿಯೇ ಆರೋಗ್ಯ ಸಚಿವಾಲಯವು ಸಭೆ ನಡೆಸಿದೆ.
‘ದೇಶದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಎಂಪಾಕ್ಸ್‌ನ ಒಂದು ಪ್ರಕರಣ ಪತ್ತೆಯಾಗಿತ್ತು. ಅಲ್ಲಿಂದ ಈಚೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ವಿದೇಶಗಳಿಂದ ಭಾರತಕ್ಕೆ ಬರುವವರಿಂದ ಸೋಂಕು ಹರಡಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ’ ಎಂದು ಸಚಿವಾಲಯ ಹೇಳಿದೆ.
‘2–4 ವಾರಗಳಲ್ಲಿ ಈ ಸೋಂಕು ತನ್ನಷ್ಟಕ್ಕೆ ತಾನೇ ಕಡಿಮೆಯಾಗಲಿದೆ. ಸೋಂಕಿತ ವ್ಯಕ್ತಿಯೊಂದಿನ ಲೈಂಗಿಕ ಸಂಪರ್ಕದಿಂದ, ವ್ಯಕ್ತಿಯ ದೇಹದಲ್ಲಿ ಗಾಯಗಳಾಗಿದ್ದರೆ ಅದರಿಂದ ಸೋರುವ ಕೀವಿನಿಂದ, ವ್ಯಕ್ತಿಯ ಬಟ್ಟೆ ತಾಕಿಸಿಕೊಳ್ಳುವುದರಿಂದ ಎಂಪಾಕ್ಸ್ ತಗುಲುತ್ತದೆ’ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಯಾವೆಲ್ಲ ಕ್ರಮಗಳು?
ಸೋಂಕು ಪತ್ತೆ ಪರೀಕ್ಷೆ ನಡೆಸಲು ವಿಮಾನ ನಿಲ್ದಾಣ ಬಂದರು ಹಾಗೂ ದೇಶದ ಗಡಿಗಳಲ್ಲಿ ಇರುವ ಆರೋಗ್ಯ ಕೇಂದ್ರಗಳನ್ನು (32 ಕೇಂದ್ರಗಳು) ಸನ್ನದ್ಧುಗೊಳಿಸುವುದು
ಎಂಪಾಕ್ಸ್ ಸೋಂಕಿನ ಪತ್ತೆ ಪರೀಕ್ಷೆ ನಡೆಸಲು ದೇಶದ ಎಲ್ಲ ಆರೋಗ್ಯ ಕೇಂದ್ರಗಳನ್ನು ಸಜ್ಜುಗೊಳಿಸುವುದು ಸೋಂಕಿತರ ಪ್ರತ್ಯೇಕವಾಸಕ್ಕೆ ಆಸ್ಪತ್ರೆಗಳಲ್ಲಿ ಕೊಠಡಿಗಳನ್ನು ತಯಾರು ಮಾಡುವುದು